ಬಳ್ಳಾರಿ : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಭೇಟಿಯಾದ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ, ಬುಡಾ ಅಧ್ಯಕ್ಷ ದಮ್ಮೂರು ಶೇಖರ್ ಅವರು ನಗರದ ಹಲವು ಕಾಮಗಾರಿಗಳಿಗೆ ಅನುಮತಿ ನೀಡುವಂತೆ ಮನವಿ ಮಾಡಿದರು.
ನಗರದ ಉತ್ತರ ಭಾಗದ ರಾಷ್ಟ್ರೀಯ ಹೆದ್ದಾರಿ - 63 ರಿಂದ ಪ್ರಸ್ತಾಪಿತ ವಿಮಾನ ನಿಲ್ದಾಣಕ್ಕೆ ರಸ್ತೆಗೆ ದಕ್ಷಿಣ ಭಾಗದ ರಿಂಗ್ ರಸ್ತೆ ಮಾದರಿಯಲ್ಲಿ ಅಭಿವೃದ್ಧಿಗೆ ಒತ್ತಾಯಿಸಿದರು. ಹೊಸಪೇಟೆ ರಸ್ತೆಯಿಂದ ಪ್ರಾರಂಭಗೊಂಡು ಕೊಳಗಲ್ಲು, ಶ್ರೀಧರಗಡ್ಡೆ, ಕಪ್ಪಗಲ್ಲು, ಸಿರಿವಾರ, ಬೇವಿನಹಳ್ಳಿ ಮತ್ತು ಕಕ್ಕಬೇವಿನಹಳ್ಳಿ ಜಮೀನುಗಳ ಮುಖಾಂತರ ಅನಂತಪುರ ರಸ್ತೆಯವರೆಗೆ ಸಂಪರ್ಕ ಕಲ್ಪಿಸುವ 24.86 ಕಿ.ಮೀ ರಸ್ತೆಗೆ ದಕ್ಷಿಣ ಭಾಗದಲ್ಲಿನ ಮೊದಲ ಹಂತದ ರಿಂಗ್ ರಸ್ತೆಗೆ 79 ರೈತರಿಂದ 53.44 ಎಕರೆ ಜಮೀನನ್ನು ವಶಪಡಿಸಿಕೊಳ್ಳಲಾಗಿದೆ. ಎರಡನೇ ಹಂತದ ರಿಂಗ್ ರೋಡ್‍ಗೆ 136 ರೈತರಿಂದ 84.47.ಎಕರೆ ಒಳಗೊಂಡು ರಿಂಗ್ ರೋಡ್ ನಿರ್ಮಿಸಲಾಗಿದ್ದು, ಸದರಿ ರಿಂಗ್ ರಸ್ತೆ ನಿರ್ಮಾಣಕ್ಕೆ ಉಚಿತವಾಗಿ ರೀಲಿಂಕ್ಷಮೆಂಟ್ ಡೀಡ್ ಮೂಲಕ ಬಿಟ್ಟು ಕೊಟ್ಟಿರುತ್ತಾರೆ ಎಂಬ ವಿಷಯವನ್ನ ಶಾಸಕ ಸೋಮಶೇಖರ ರೆಡ್ಡಿ ಸಿಎಂ ಗಮನಕ್ಕೆ ತಂದರು.
ಓದಿ : ‘ಲುಂಗಿ ಡ್ಯಾನ್ಸ್’ ಹಾಡಿಗೆ ಕುಣಿದು ಕುಪ್ಪಳಿಸಿದ ಮಂಗಳೂರು ಪೊಲೀಸ್ ಕಮಿಷನರ್, ಡಿಸಿಪಿ: ವಿಡಿಯೋ
ಉಚಿತವಾಗಿ ಜಮೀನನ್ನು ಬಿಟ್ಟುಕೊಡುವ ರೈತರಿಗೆ ಭೂ ಪರಿಹಾರಕ್ಕೆ ಬದಲಾಗಿ ರಸ್ತೆಯ ಎರಡು ಬದಿಯಲ್ಲಿ 150 ಅಡಿ ಜಮೀನನ್ನು ವಾಣಿಜ್ಯ ಉದ್ದೇಶಕ್ಕಾಗಿ ಹಾಗೂ ಅವರ ಉಳಿದ ಜಮೀನುಗಳಲ್ಲಿ 5 ಎಕರೆ ವರೆಗೆ ಮಾತ್ರ ವಸತಿಗಾಗಿ ಭೂ ಪರಿವರ್ತನೆ ಶುಲ್ಕ ವಿನಾಯಿತಿ ನೀಡಬೇಕು. ಹಾಗೂ ಜಿಲ್ಲಾಡಳಿತದಿಂದ ಉಚಿತವಾಗಿ ಭೂಪರಿವರ್ತನೆ ಮಾಡಿಕೊಡಲು ಆದೇಶ ಹೊರಡಿಸಬೇಕು ಎಂದು ಅವರು ಸಿಎಂ ಬಳಿ ಮನವಿ ಮಾಡಿದರು. ಈ ಕುರಿತು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳುವಂತೆಯೂ ಇದೇ ವೇಳೆ ಸಿಎಂಗೆ ಅರಿಕೆ ಮಾಡಿದರು.