ವಿಜಯನಗರ: ರಸ್ತೆ ಅಪಘಾತದಲ್ಲಿ ರಂಭಾಪುರಿ ಶ್ರೀಗಳು ಅಪಾಯದಿಂದ ಪಾರಾಗಿರುವ ಘಟನೆ ಹರಪನಹಳ್ಳಿ ತಾಲ್ಲೂಕಿನ ಚಿರಸ್ತಹಳ್ಳಿಯ ತಿರುವಿನಲ್ಲಿ ನಡೆದಿದೆ. ರಂಭಾಪುರಿ ಶ್ರೀಗಳು ರಂಭಾಪುರಿ ಪೀಠದಿಂದ ಆಲಮಟ್ಟಿ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು. ಶ್ರೀಗಳು ಶಿವಮೊಗ್ಗ- ಹೊಸಪೇಟೆ ರಾಜ್ಯ ಹೆದ್ದಾರಿ 25ರಲ್ಲಿ ಹರಿಹರದಿಂದ ಹರಪನಹಳ್ಳಿ ಮಾರ್ಗವಾಗಿ ಚಲಿಸುತ್ತಿದ್ದಾಗ ಶ್ರಿಗಳ ಕಾರು ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಶ್ರೀಗಳ ಕಾರಿನ ಮೇಲೆ ಹಾರಿ ಬಿದ್ದಿದ್ದಾರೆ.
ಈ ಅಪಘಾತ ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಲಿಲ್ಲ. ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಸದ್ಯ ಹರಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಹರಪನಹಳ್ಳಿ ತೆಗ್ಗಿನ ಮಠದ ಶ್ರೀ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿಗಳು ಭೇಟಿ ನೀಡಿದರು. ರಂಭಾಪುರಿ ಶ್ರೀಗಳನ್ನು ಹರಪನಹಳ್ಳಿಯ ತೆಗ್ಗಿನ ಮಠಕ್ಕೆ ಕರೆದುಕೊಂಡು ಹೋಗಿ ಉಪಚರಿಸಲಾಯಿತು.
ಇದನ್ನೂ ಓದಿ: ಮಕ್ಕಳ ವಿಷಯಕ್ಕೆ ನಡೆದ ಗಲಾಟೆಗೆ ಓರ್ವ ಸಾವು: ಪೊಲೀಸರ ಮೇಲೆ ಕಲ್ಲು ತೂರಾಟ, ಗಾಯ