ಬಳ್ಳಾರಿ: ಕೃಷಿ ಸಂಬಂಧಿ ಕಾಯ್ದೆ ಜಾರಿ ಕುರಿತು ಜ. 4 ರಂದು ಹೋರಾಟ ನಿರತ ರೈತರ ಜೊತೆ ಮಾತುಕತೆ ನಡೆಯಲಿದ್ದು, ನಮ್ಮ ಸರ್ಕಾರ ರೈತರ ಮನವೊಲಿಸುವ ವಿಶ್ವಾಸ ಇದೆ ಎಂದು ರಾಜ್ಯಸಭಾ ಸದಸ್ಯ ಹಾಗೂ ರೈತ ಮೋರ್ಚಾ ರಾಜ್ಯಾಧ್ಯಕ್ಷ ಈರಣ್ಣ ಕಡಾಡಿ ಭರವಸೆ ವ್ಯಕ್ತಪಡಿಸಿದ್ದಾರೆ.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೃಷಿ ಉತ್ಪನ್ನ ಬೆಲೆ ಖಾತರಿ, ಕೃಷಿ ಭೂಮಿ ಕಾಯ್ದೆ ಸೇರಿದಂತೆ ಮೂರು ಕಾಯ್ದೆ, ರಾಜ್ಯ ಸರ್ಕಾರ ಇದಕ್ಕೆ ಪೂರಕವಾದ ಎರಡು ಕಾಯ್ದೆ ಜಾರಿ ಮಾಡಿದೆ. ಇದರ ಉದ್ದೇಶ ರೈತರ ಆದಾಯ ಹೆಚ್ಚಳ ಮಾಡುವುದೇ ಆಗಿದೆ. ಇದನ್ನು ಅರ್ಥಮಾಡಿಕೊಳ್ಳದ ಕೆಲವರು ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದಾರೆ. ಅವರ ಒಂದೇ ಬೇಡಿಕೆ ಕಾನೂನು ಹಿಂಪಡೆಯಬೇಕು ಎಂಬುದಾಗಿದೆ. ಇದನ್ನು ಒಪ್ಪಲು ಸಾಧ್ಯವೇ ಇಲ್ಲ. ಜ.4 ರಂದು ನಡೆಯುವ ಸಂಧಾನ ಯಶ ಕಾಣಲಿದೆ ಎಂದರು.
ರೈತರ ಹಿತಕ್ಕಾಗಿ ಕೇಂದ್ರ ಮೂರು ಮಸೂದೆ, ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆ ಜಾರಿಮಾಡಿದೆ. ರೈತರ ಆದಾಯ ಹೆಚ್ಚಾಗಬೇಕು. ದೇಶದ ಜಿಡಿಪಿಗೆ ರೈತರ ಕೊಡುಗೆ ಶೇಕಡಾ 16ರಷ್ಟಿದ್ದು, ಇದು ಹೆಚ್ಚಬೇಕೆಂಬ ಕಾರಣಕ್ಕೆ ಕಾಯ್ದೆ ಜಾರಿಮಾಡಲಾಗಿದೆ. ದೇಶದ ಶೇಕಡಾ 48ರಷ್ಟು ಜನ ಇಂದು ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಅವರ ಕ್ಷೇಮಕ್ಕೆ ಕಾನೂನು ಬೇಕಿದೆ. ಹೋರಾಟ ನಿರತ ರೈತರಿಗೆ ಕೇಂದ್ರ ಸರ್ಕಾರ ಅವರು ಕೇಳುವ ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ರೈತರು ಹೋರಾಟ ಹಿಂದೆ ಪಡೆಯಲು ಸಿದ್ಧರಿಲ್ಲ. ಇದಕ್ಕೆ ಪಂಜಾಬ್ ರೈತರಲ್ಲಿ ಎಪಿಎಂಸಿ ಬಂದ್ ಆಗಲಿದೆ ಎಂಬ ತಪ್ಪು ಕಲ್ಪನೆಯೇ ಕಾರಣ ಎಂದರು.
ನಮ್ಮ ಸರ್ಕಾರ ಬಂದ ಮೇಲೆ ಕೃಷಿ ಸಮ್ಮಾನ, ಕೃಷಿ ವಿಮೆ ಕಾಯ್ದೆ ಜಾರಿ ಮಾಡಿದೆ. ಇದರಡಿ ಬಳ್ಳಾರಿ ಜಿಲ್ಲೆ 2 ಲಕ್ಷ 10 ಸಾವಿರ ರೈತರಿಗೆ ಲಾಭ ಪಡೆದುಕೊಂಡಿದ್ದಾರೆ. 6.5 ಕೋಟಿ ಮಣ್ಣು ಆರೋಗ್ಯ ಕಾರ್ಡ್ ತಂದಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸದ ವೈ.ದೇವೇಂದ್ರಪ್ಪ, ಪಕ್ಷದ ಜಿಲ್ಲಾಧ್ಯಕ್ಷ ಎಸ್.ಚನ್ನಸವನಗೌಡ ಪಾಟೀಲ, ರೈತ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷ ಎಸ್.ಗುರುಲಿಂಗನಗೌಡ, ಬಿಜೆಪಿ ಮುಖಂಡರಾದ ಲೋಕೇಶ್, ಚಂದ್ರಶೇಖರ ಮಾಗನೂರು, ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಗಣಪಾಲ್ ಐನಾಥರೆಡ್ಡಿ ಮೊದಲಾದವರು ಇದ್ದರು.