ಬಳ್ಳಾರಿ : ಕಳೆದ ಮೂರು ವರ್ಷಗಳಿಂದ ಬಾಗಿಲು ಮುಚ್ಚಿದ್ದ ಬಳ್ಳಾರಿ ವಿಮ್ಸ್ ಆಸ್ಪತ್ರೆಯ ವಿಕಿರಣ ಚಿಕಿತ್ಸಾ ವಿಭಾಗ ನಿನ್ನೆಯಿಂದ ಪುನಾರಂಭವಾಗಿದೆ.
ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ವಿಕಿರಣ ಚಿಕಿತ್ಸೆಗೆಂದು ದೂರದ ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ ಸೇರಿದಂತೆ ನಾನಾ ನಗರಗಳಿಗೆ ತೆರಳಬೇಕಾಗಿತ್ತು. ಹೀಗಾಗಿ ರೋಗಿಗಳು ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಹೀಗಾಗಿ, ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ ವಿಕಿರಣ ಚಿಕಿತ್ಸಾ ವಿಭಾಗದ ವೈದ್ಯಕೀಯ ಪರಿಕರಗಳಿಗೆ ಅಧುನಿಕ ಸ್ಪರ್ಶ ನೀಡಿ, ವಿಭಾಗವನ್ನು ಪುನರಾರಂಭ ಮಾಡಿಸಿದ್ದಾರೆ.
ಬಳ್ಳಾರಿ, ವಿಜಯನಗರ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಹಲವು ಜಿಲ್ಲೆಗಳು ಮತ್ತು ನೆರೆಯ ಆಂಧ್ರದ ಗಡಿ ಗ್ರಾಮಗಳ ಜನರಿಗೆ ಸಂಜೀವಿನಿಯಾಗಿರುವ ವಿಮ್ಸ್ ಆಸ್ಪತ್ರೆಯಲ್ಲಿ, ಇದೀಗ ಬ್ರ್ಯಾಕಿಥೆರೆಪಿ ಮತ್ತು ರೆಡಿಯೇಷನ್ ಆಂಕಾಲಜಿ ಥೆರೆಪಿ ಪುನಾರಂಭ ಆಗಿರುವುದು ಜನರಲ್ಲಿ ಸಂತಸ ತಂದಿದೆ.
ಇದನ್ನೂ ಓದಿ: ರಾಯಚೂರಲ್ಲಿ ಏಮ್ಸ್ ಸ್ಥಾಪಿಸುವಂತೆ ಕೇಂದ್ರಕ್ಕೆ ಪತ್ರ: ಹೋರಾಟ ಸಮಿತಿಗೆ ಸಿಎಂ ಭರವಸೆ
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ವಿಮ್ಸ್ ನಿರ್ದೇಶಕ ಡಾ.ಗಂಗಾಧರ ಗೌಡ, ಬಹು ದಿನಗಳಿಂದ ವಿಕಿರಣ ಚಿಕಿತ್ಸಾ ವಿಭಾಗ ಮುಚ್ಚಲಾಗಿತ್ತು. ಅಲ್ಲಿನ ವೈದ್ಯಕೀಯ ಪರಿಕರಗಳು ಹಾಳಾಗಿದ್ದವು. ಅವುಗಳನ್ನು ದುರಸ್ತಿ ಮಾಡಿಸುವ ಮೂಲಕ ವಿಕಿರಣ ಚಿಕಿತ್ಸಾ ವಿಭಾಗವನ್ನು ಮತ್ತೆ ಆರಂಭಿಸಲಾಗಿದೆ. ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು.
ಸಂಡೂರು ತಾಲೂಕಿನ ತಾರಾನಗರದ ನಿವಾಸಿ ನೂರ್ ಬಾಷಾ ಮಾತನಾಡಿ, ವಿಕಿರಣ ಚಿಕಿತ್ಸಾ ವಿಭಾಗ ಪುನರಾಂಭ ಆಗಿರುವುದು ನಮಗೆಲ್ಲ ಖುಷಿ ತಂದಿದೆ. ಈ ಮೊದಲು ಬ್ರ್ಯಾಕಿಥೆರೆಪಿ ಹಾಗೂ ರೆಡಿಯೇಷನ್ ಆಂಕಾಲಜಿ ಥೆರೆಪಿ ಸಂಪೂರ್ಣವಾಗಿ ಬಂದ್ ಆಗಿತ್ತು. ಹೀಗಾಗಿ, ದೂರದ ಮಹಾನಗರಗಳಿಗೆ ಈ ಚಿಕಿತ್ಸೆಗೆಂದೇ ಕ್ಯಾನ್ಸರ್ ರೋಗಿಗಳು ಹೋಗಬೇಕಿತ್ತು. ವಿಕಿರಣ ಚಿಕಿತ್ಸಾ ವಿಭಾಗದಿಂದ ಆ ಸಮಸ್ಯೆ ತಪ್ಪಿದೆ ಎಂದರು.