ಬಳ್ಳಾರಿ: ಸಂಡೂರು ಪಟ್ಟಣ ಹೊರ ವಲಯದ ಬಿಕೆಜಿ ಮೈನಿಂಗ್ ಕಂಪನಿ ಬಳಿ ಅಂದಾಜು 12-13 ಅಡಿಯುಳ್ಳ ಹೆಬ್ಬಾವೊಂದು ಪತ್ತೆಯಾಗಿದ್ದು, ಅದನ್ನು ಉರಗ ರಕ್ಷಕ ಸಂತೋಷ ಕೆ. ಶಿಂದೆ ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ಸೋಮವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಈ ಹೆಬ್ಬಾವು ಸಂಡೂರಿನ ದಟ್ಟ ಅರಣ್ಯ ಪ್ರದೇಶದಿಂದ ಬಿಕೆಜಿ ಮೈನಿಂಗ್ ಕಂಪನಿ ಮಾರ್ಗದ ಕಚ್ಚಾ ರಸ್ತೆಯಲ್ಲಿ ಭಾರಿ ವಾಹನಗಳು ಸಂಚರಿಸುತ್ತಿರುವಾಗ ಕಾಣಿಸಿಕೊಂಡಿತ್ತು. ಇನ್ನೇನು ಸ್ವಲ್ಪದರಲ್ಲೇ ವಾಹನಗಳ ಚಕ್ರದಡಿ ಸಾವನ್ನಪ್ಪುವ ಸಾಧ್ಯತೆಯನ್ನು ಸೂಕ್ಷ್ಮವಾಗಿ ಮನಗಂಡ ಉರಗ ಪ್ರಿಯ ಸಂತೋಷ ಕೆ. ಶಿಂದೆ ಅವರು ಕೂಡಲೇ ಹೆಬ್ಬಾವಿನ ಹಿಂಬದಿ ಬಾಲವನ್ನು ಹಿಡಿದು ನಿಧಾನವಾಗಿ ತಮ್ಮ ದೇಹ - ಕೊರಳಿಗೆ ಸುತ್ತಿಕೊಂಡಿದ್ದಾರೆ. ಆ ಬಳಿಕ, ಅದನ್ನು ಕಾಡಿಗೆ ಬಿಟ್ಟು ಬೃಹತ್ ಗಾತ್ರದ ಹೆಬ್ಬಾವನ್ನು ರಕ್ಷಣೆ ಮಾಡಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಈ ಸುದ್ದಿಯನ್ನೂ ಓದಿ: ತಮಿಳುನಾಡಿನ ಚಿನ್ನಮ್ಮ ಖ್ಯಾತಿಯ ಶಶಿಕಲಾ ಜ.27 ರಂದು ಜೈಲಿನಿಂದ ಬಿಡುಗಡೆ
ಈ ಸಂಬಂಧ ಈ ಟಿವಿ ಭಾರತದೊಂದಿಗೆ ಮಾತನಾಡಿದ ಉರಗ ಪ್ರೇಮಿ ಸಂತೋಷ ಕೆ. ಶಿಂದೆ, ವಿಎಸ್ ಲಾಡ್ ಕಂಪನಿಯಲ್ಲಿ ಅವಿತುಕೊಂಡಿದ್ದ ನಾಗರಹಾವು ಹಿಡಿದುಕೊಂಡು ಕಾಡಿಗೆ ಬಿಡುವ ಸಲುವಾಗಿಯೇ ಬಿಕೆಜಿ ಮೈನಿಂಗ್ ಕಂಪನಿಯ ಬಳಿ ಬಂದ ವೇಳೆ ಈ ನಾಗರಹಾವು ಕಂಡಿತು. ಇನ್ನೇನು ರಸ್ತೆಗೆ ಬರುತ್ತೆ ಎಂಬ ತರಾತುರಿಯಲ್ಲಿ ಅದರ ಬಾಲ ಹಿಡಿದು ಅದನ್ನು ರಕ್ಷಿಸಿದೆ. ನನ್ನ ಅನುಭವದಲ್ಲಿ ಇಂತಹ ದೈತ್ಯಾಕಾರದ ಹೆಬ್ಬಾವು ಹಿಡಿದಿರೋದು ಬಹಳ ಕಮ್ಮಿ. ಸರಿ ಸುಮಾರು 40 ಕೆಜಿ ಯಷ್ಟು ತೂಕ ಇರಬಹುದು ಈ ಹೆಬ್ಬಾವು. ಸಿಲ್ವರ್ - ಬ್ಲಾಕ್ ಕಲರ್ ಉಳ್ಳ ಈ ಹಾವು ಅಂದಾಜು 12 ರಿಂದ 13 ಅಡಿ ಇದೆ. 12- 15 ವರ್ಷದ ಬಾಲಕರನ್ನು ತಿಂದು ತೇಗುವ ಸಾಮರ್ಥ್ಯವನ್ನು ಈ ಹೆಬ್ಬಾವು ಹೊಂದಿರುತ್ತದೆ ಎಂದು ನನಗೆ ಅನಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.