ಬಳ್ಳಾರಿ: ಹಮಾಲಿ ಕಾರ್ಮಿಕರ ವಿವಿಧ ಬೇಡಿಕೆಗಳ ಈಡೇರಿಕೆ ಹಾಗೂ ಗುತ್ತಿಗೆ ಕಾರ್ಮಿಕರನ್ನು ಮುಂದುವರೆಸಲು ಆಗ್ರಹಿಸಿ, ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಶನ್ ಹಾಗೂ ಬಳ್ಳಾರಿ ಥರ್ಮಲ್ ಪವರ್ ಸ್ಟೇಷನ್ ಗುತ್ತಿಗೆ ಕಾರ್ಮಿಕರ ಸಂಘದ ನೇತೃತ್ವದಲ್ಲಿ ನೂರಾರು ಕಾರ್ಮಿಕರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಗುರುವಾರ ಧರಣಿ ನಡೆಸಿದರು.
ಇದಕ್ಕೂ ಮುಂಚೆ ನಗರದ ಹೆಚ್.ಆರ್.ಗವಿಯಪ್ಪ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ಬಂದು ಮನವಿ ಸಲ್ಲಿಸಿದರು. ಎಪಿಎಂಸಿ ಮಾರುಕಟ್ಟೆಯಲ್ಲಿ ಅತಿಹೆಚ್ಚು ಮಹಿಳೆಯರು ಕೆಲಸ ನಿರ್ವಹಿಸುತ್ತಿರುವ ಕಾರಣ ಮೂಲಭೂತ ಸೌಲಭ್ಯಗಳಾದ ಶುದ್ಧ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆಯನ್ನು ಶೀಘ್ರವೇ ಕಲ್ಪಿಸಬೇಕು. ನೆನೆಗುದಿಗೆ ಬಿದ್ದಿರುವ ವಸತಿ ಯೋಜನೆ ಜಾರಿಗೊಳಿಸಿ, ಸೂಕ್ತ ವಸತಿ ಸೌಲಭ್ಯ ಒದಗಿಸಬೇಕು ಎಂದರು.
ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಿ ಮುಕ್ತ ಮಾರುಕಟ್ಟೆಗೆ ಅವಕಾಶ ನೀಡಿದ್ದು, ಈ ಕಾಯ್ದೆಯನ್ನು ಹಿಂಪಡೆಯಬೇಕು. ಕೋವಿಡ್ನಿಂದ ಘೋಷಣೆಯಾದ ಲಾಕ್ಡೌನ್ನಿಂದ ಸಂಕಷ್ಟಕ್ಕೀಡಾಗಿ ಕೆಲಸ ಕಳೆದುಕೊಂಡ ಹಮಾಲಿ ಕಾರ್ಮಿಕರಿಗೆ ತಕ್ಷಣ 6 ತಿಂಗಳಿಗೆ ಮಾಸಿಕ 7,500 ರೂ.ನಂತೆ ನೆರವು ನೀಡಬೇಕು. ಜೊತೆಗೆ ಆಹಾರ ಧಾನ್ಯಗಳನ್ನು ನೀಡಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.
ಗುತ್ತಿಗೆ ಕಾರ್ಮಿಕರನ್ನು ಮುಂದುವರೆಸಿ: ಬಳ್ಳಾರಿ ಥರ್ಮಲ್ ಪವರ್ ಸ್ಟೇಷನ್ ಗುತ್ತಿಗೆ ಕಾರ್ಮಿಕರ ಸಂಘದವರು ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಕೂಲ್ ಹ್ಯಾಡಲಿಂಗ್ ಪ್ಲಾಂಟ್ನಲ್ಲಿ ವಿವಿಧ ದೈನಂದಿನ ಚಲನೆ ಮತ್ತು ಪಾಲನೆ ಕಾಮಗಾರಿಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ಕೆಲಸದಲ್ಲಿ ಮುಂದುವರೆಸಬೇಕು. ಪೂರ್ಣಾವಧಿಯ ಕೆಲಸ ಮತ್ತು ವೇತನ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜೆ.ಸತ್ಯಬಾಬು, ಸಿದ್ದಮ್ಮ, ರುದ್ರಮ್ಮ, ಶಾಂತಮ್ಮ, ಸಂಜಮ್ಮ, ಗಂಗಮ್ಮ, ಪದ್ಮ, ತಿಪ್ಪಮ್ಮ, ಗಾದಿಲಿಂಗಪ್ಪ, ಪಾಂಡುರಂಗ, ರತ್ನಮ್ಮ, ಪಾರ್ವತಿ ಇದ್ದರು.