ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲಾ ವಿಭಜನೆ ವಿರೋಧಿಸಿ ಕರ್ನಾಟಕ ಜನಸೈನ್ಯ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮೂರನೇ ದಿನಕ್ಕೆ ಕಾಲಿಟ್ಟಿದೆ.
ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಮತ್ತು ಕರ್ನಾಟಕ ಜನಸೈನ್ಯ ನೇತೃತ್ವದಲ್ಲಿ ಧರಣಿ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಈಟಿವಿ ಭಾರತದೊಂದಿಗೆ ಮಾತನಾಡಿದ ಜನಸೈನ್ಯ ರಾಜ್ಯಾಧ್ಯಕ್ಷ ಕೆ.ಎರ್ರಿಸ್ವಾಮಿ, ರಾಜ್ಯದಲ್ಲಿ ಪ್ರಜಾಪ್ರಭುತ್ವ ಇದೆಯೋ ಅಥವಾ ಇಲ್ಲವೋ?, ರಾಜ್ಯ ಸರ್ಕಾರ ಇದೆಯೋ ಅಥವಾ ಇಲ್ಲವೋ ಎನ್ನುವ ಅನುಮಾನ ಕಾಡುತ್ತಿದೆ ಎಂದರು.
ಓದಿ: ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆ ಕುರಿತ ಜನಜಾಗೃತಿ.. ಇಂದಿನಿಂದ ತಾಲೂಕು ಪ್ರವಾಸ ಆರಂಭ
ಕಳೆದೊಂದು ವರ್ಷದಿಂದ ಜಿಲ್ಲೆ ವಿಭಜನೆ ಮಾಡಬಾರದು. ಇದರಿಂದ ಯಾವುದೇ ಪ್ರಯೋಜನ ಇಲ್ಲ ಎಂಬ ಉದ್ದೇಶದಿಂದ ಕೂಲಿ ಕಾರ್ಮಿಕರು, ರೈತರು, ಕನ್ನಡಪರ, ಪ್ರಗತಿಪರ ಸಂಘಟನೆಗಳು, ಮಹಿಳೆಯರು, ಮಂಗಳಮುಖಿಯವರು ಪ್ರತಿಭಟನೆ ಮಾಡಿಕೊಂಡು ಬಂದಿದ್ದೇವೆ. ಆದರೆ ಸರ್ಕಾರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.