ಹೊಸಪೇಟೆ: ಕುಡಿಯುವ ನೀರಿಗಾಗಿ ಆಗ್ರಹಿಸಿ ಜಿಂದಾಲ್ ಕಂಪನಿಯ ವಿರುದ್ಧ ಬೈಲುವದ್ದುಗೇರಿ, ಧರ್ಮಸಾಗರ ಮತ್ತು ಗುಂಡ್ಲುವದ್ದಗೇರಿಯ ಗ್ರಾಮಸ್ಥರು ಖಾಲಿ ಬಿಂದಿಗೆಗಳನ್ನು ಹಿಡಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಕುಡಿಯು ನೀರಿಗಾಗಿ ಹಲವಾರು ವರ್ಷಗಳಿಂದ ಪ್ರತಿಭಟನೆ ಮಾಡುತ್ತಾ ಬಂದಿದ್ದೇವೆ. ಜಿಲ್ಲಾಧಿಕಾರಿ ಆದೇಶವಿದ್ದರೂ ಅದರ ಕಡೆ ಗಮನ ಹರಿಸುತ್ತಿಲ್ಲ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತ ಪಡಿಸಿದ್ದಾರೆ.
ಬಳ್ಳಾರಿ ಮತ್ತು ಹೊಸಪೇಟೆಯ 66 ನೇ ರಾಷ್ಟ್ರೀಯ ಹೆದ್ದಾರಿಯನ್ನು ತಡೆದ ಪ್ರತಿಭಟನಾಕಾರರು ದಶಕದಿಂದ ಕುಡಿಯುವ ನೀರಿಗಾಗಿ ಹೋರಾಟ ನಡೆಸಿದ್ದೇವೆ. ಆದರೆ ಜಿಂದಲ್ ಕಂಪನಿ ಮತ್ತು ಸರ್ಕಾರಿ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ ಎಂದು ದೂರಿದರು. ಈ ಬಗ್ಗೆ ಮಾತನಾಡಿದ ಪ್ರತಿಭಟನಾಕಾರ ಪಣೀಂದ್ರ ಗೌಡ, ಜಿಲ್ಲೆಯ ಬೈಲುವದ್ಗೇರಿ ಕೆರೆಗೆ ನೀರನ್ನು ತುಂಬಿಸಿದರೆ ಬೈಲುವದ್ಗೇರಿ, ಗುಂಡ್ಲುವದ್ಗೇರಿ, ಧರ್ಮಸಾಗರದ ರೈತರಿಗೆ ಹಾಗೂ ಜಾನುವಾರುಗಳಿಗೆ ಅನುಕೂಲವಾಗುತ್ತದೆ. ಸುತ್ತ ಮುತ್ತಲಿನ ಕೊಳವೆ ಬಾವಿಗಳಲ್ಲಿ ಅಂತರ್ಜಲದ ಮಟ್ಟದ ಹೆಚ್ಚುತ್ತದೆ. ಸರ್ಕಾರ ಕಂಪನಿಗಳಿಗೆ ನೀರನ್ನು ಬಿಡುತ್ತದೆ. ಜನ ಸಾಮಾನ್ಯರು ಕುಡಿಯಲು ನೀರನ್ನು ಕೊಡಿ ಎಂದು ಕೇಳಲು ಪ್ರತಿಭಟನೆಯನ್ನು ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಅಕ್ರೋಶ ವ್ಯಕ್ತ ಪಡಿಸಿದರು.
ಬೈಲುವದ್ಗೇರಿ ಕೆರೆಯಿಂದ ಜಿಂದಾಲ್ ಕಂಪನಿಗೆ ಪೈಪಗಳ ಮುಖಾಂತರ ನೀರನ್ನು ತೆಗದುಕೊಂಡು ಹೋಗಿದ್ದಾರೆ. ಅದರಿಂದ ನೀರನ್ನು ಬೀಡಬೇಕು ಎಂದು ಜಿಲ್ಲಾಧಿಕಾರಿಯಿಂದ ಆದೇಶ ಹೊರಡಿಸಿದ್ದಾರೆ. ಆದರೆ ಕಂಪನಿಯವರು ಇದಕ್ಕೆ ಕ್ಯಾರೆ ಎನ್ನುತ್ತಿಲ್ಲ. ಇದೇ ರೀತಿಯಾಗಿ ಮುಂದವರೆದರೆ ಕಂಪನಿಯ ವಿರುದ್ದ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.