ಬಳ್ಳಾರಿ: ಉಪನ್ಯಾಸಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದ ಎಎಸ್ ಎಂ ಮಹಿಳಾ ಕಾಲೇಜಿನ ಪ್ರಾಂಶುಪಾಲ ಶರಣಪ್ಪ ಅವರನ್ನು ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಮಹಿಳಾ ವಿದ್ಯಾಲಯದ ಉಪನ್ಯಾಸಕಿ ಮೇಲೆ ಲೈಂಗಿಕ ಕಿರುಕುಳ, ದೌರ್ಜನ್ಯ, ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೊಂದ ಕಾಲೇಜು ಉಪನ್ಯಾಸಕಿ ನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿ, ಕ್ರಮಕ್ಕೆ ಒತ್ತಾಯಿಸಿದ್ದರು.
ಈ ಕುರಿತು ವೀರಶೈವ ವಿದ್ಯಾವರ್ಧಕ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಆರ್.ರಾಮನಗೌಡ ಅವರ ಅಧ್ಯಕ್ಷತೆಯಲ್ಲಿ ತುರ್ತು ಕಾರ್ಯಕಾರಿ ಸಭೆ ಹಮ್ಮಿಕೊಳ್ಳಲಾಗಿತ್ತು. ಎಎಸ್ ಎಂ ಮಹಿಳಾ ಕಾಲೇಜು ಪ್ರಾಚಾರ್ಯ ಶರಣಪ್ಪ ಅವರು, ಕಾಲೇಜಿನ ಉಪನ್ಯಾಸಕಿಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ಸಂಘದ ಕಚೇರಿಗೆ ಸಂತ್ರಸ್ಥೆ ಮಹಿಳೆ ನೀಡಿದ ದೂರು ಆಧರಿಸಿ ಪ್ರಾಚಾರ್ಯ ಶರಣಪ್ಪ ಅವರು, ಶ್ರೀಮತಿ ಅಲ್ಲಂ ಸುಮಂಗಳಮ್ಮ ಕಾಲೇಜಿಗೆ ಮತ್ತು ವೀರಶೈವ ವಿದ್ಯಾವರ್ಧಕ ಸಂಘಕ್ಕೆ ಕೆಟ್ಟ ಹೆಸರು ತಂದಿರುವುದನ್ನು ಖಂಡಿಸಿ ಅವರ ಮೇಲಿದ್ದ ವಿವಿಧ ಆಪಾದನೆಗಳನ್ನು ಮಾಡಲಾಗಿದ್ದು, ವಿಚಾರಣೆಗಳು ಪೂರ್ಣಗೊಳ್ಳುವವರೆಗೂ ಪ್ರಾಚಾರ್ಯ ಶರಣಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಸಹ ಕಾರ್ಯದರ್ಶಿ ದರೂರು ಶಾಂತನಗೌಡ ತಿಳಿಸಿದ್ದಾರೆ.
ಉಪನ್ಯಾಸಕಿ ಪ್ರಾಚಾರ್ಯರ ವಿರುದ್ಧ ನೀಡಿದ ದೂರಿನಲ್ಲೇನಿದೆ?: ''ಕಳೆದ ಮಾರ್ಚ್ 31ರಂದು ಕೆಲಸ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ವೇಳೆ ಕಾಲೇಜಿನ ಭೌತಶಾಸ್ತ್ರ ಲ್ಯಾಬ್‌ಗೆ ಕರೆದುಕೊಂಡು ಹೋಗಿ ಅಶ್ಲೀಲವಾಗಿ ಮಾತನಾಡಿದ್ದಲ್ಲದೇ, ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾರೆ ಎಂದು ದೂರಿನಲ್ಲಿ ಉಪನ್ಯಾಸಕಿ ಉಲ್ಲೇಖಿಸಿದ್ದಾರೆ. ಕಾಲೇಜಿನಲ್ಲಿ ನಡೆಯುತ್ತಿದ್ದ ಪ್ರತಿ ಕಾರ್ಯಕ್ರಮದಲ್ಲೂ ತಮ್ಮನ್ನು ಹುಡುಕಿಕೊಂಡು ಪ್ರಿನ್ಸಿಪಾಲ್ ಬರುತ್ತಿದ್ದರು. ಬೇರೆ ರೀತಿಯಲ್ಲಿ ದೃಷ್ಟಿಯಿಂದ ನೋಡುತ್ತಿದ್ದರು. ಸಹಕರಿಸದಿದ್ದರೆ ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದರು. ಇದರಿಂದ ಮಾನಸಿಕ ಕಿರುಕುಳ ಅನುಭವಿಸುತ್ತಿದ್ದೇನೆ'' ಎಂದು ಸಂತ್ರಸ್ತೆ ಆರೋಪಿಸಿದ್ದರು.
''ಲೈಂಗಿಕ ಕಿರುಕುಳ ನೀಡುವುದಲ್ಲದೇ ಯಾರಿಗಾದರೂ ವಿಷಯ ತಿಳಿಸಿದರೆ ಕೆಲಸದಿಂದ ತೆಗೆಸಿ, ನಿನ್ನ ಪ್ರಾಣ ತೆಗೆಯುತ್ತೇನೆ ಎಂದು ಪ್ರಾಣ ಬೆದರಿಕೆ ಹಾಕುತ್ತಿದ್ದರು. ಈ ಬಗ್ಗೆ ಕಾಲೇಜಿನ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದರೂ ಪ್ರಾಂಶುಪಾಲರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ'' ಎಂದು ಅತಿಥಿ ಉಪನ್ಯಾಸಕಿ ಆರೋಪ ಮಾಡಿದ್ದರು.
ಅಷ್ಟೇ ಅಲ್ಲದೇ ಪ್ರಾಚಾರ್ಯರ ಮಾತಿಗೆ ಮನನೊಂದು ಕೆಲವೊಂದು ದಿನ ಕಾಲೇಜಿಗೆ ಹೋಗದೆ ರಜೆ ಹಾಕುತ್ತಿದ್ದರು ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಈ ಬಗ್ಗೆ ಮಹಿಳಾ ಠಾಣೆ ಪೊಲೀಸರು ಸಂತ್ರಸ್ತೆ ದೂರಿನ ಮೇರೆಗೆ ಐಪಿಸಿ 354 (ಎ), 504, 506, 509 ಸೆಕ್ಷನ್ಸ್ ಅಡಿ ದೂರು ದಾಖಲಿಸಿಕೊಂಡು ಪ್ರಕರಣದ ತನಿಖೆ ಆರಂಭಿಸಿದ್ದರು.
ಇದನ್ನೂ ಓದಿ: ಮಂಡ್ಯ ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಬಂಧಿತ ಮುಖ್ಯ ಶಿಕ್ಷಕ ಅಮಾನತು
ಇದನ್ನೂ ಓದಿ:ಯುವತಿಯನ್ನು ಕಾರಿನಲ್ಲಿ ಸುತ್ತಾಡಿಸಿ ಕೊಂದು ಮ್ಯಾನ್‌ಹೋಲ್‌ಗೆಸೆದ ಅರ್ಚಕ: ಹೈದರಾಬಾದ್‌ನಲ್ಲೊಂದು ಭೀಕರ ಹತ್ಯೆ!