ಬಳ್ಳಾರಿ : ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್. ದೊರೆಸ್ವಾಮಿಯವರಿಗೆ ತಮ್ಮ ಮಾತಿನಲ್ಲಿ ಹಿಡಿತ ಇರಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ವಾಗ್ದಾಳಿ ನಡೆಸಿದರು.
ತೋರಣಗಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ವೀರ ಸಾವರ್ಕರ್ ಅವರ ಬಗ್ಗೆ ದೊರೆಸ್ವಾಮಿ ಹಗುರವಾಗಿ ಮಾತನಾಡಿದ್ದಾರೆ. ಸಾವರ್ಕರ್ ಅವರು ಅಂಡಮಾನ್ ನಿಕೋಬಾರ್ ಜೈಲಿನಲ್ಲಿದ್ದರು. ದೇಶಭಕ್ತರ ಬಗ್ಗೆ ಈ ರೀತಿ ಮಾತನಾಡೋದು ಸರಿಯಲ್ಲ. ಸಾವರ್ಕರ್ ಬಗ್ಗೆ, ಮೋದಿ ಅವರ ಬಗ್ಗೆ ಕೀಳು ಮಟ್ಟದ ಮಾತುಗಳನ್ನಾಡಬಾರದು. ನೀವು ಹಾಗೆ ಮಾತನಾಡಿದ್ರೆ ಅದೇ ಭಾಷೆಯಲ್ಲಿ ಉತ್ತರ ಕೊಡೋರು ತಯಾರಾಗುತ್ತಾರೆ ಎಂದು ಶಾಸಕ ಬಸವರಾಜ ಪಾಟೀಲ ಯತ್ನಾಳ್ ಅವರನ್ನು ಸಮರ್ಥನೆ ಮಾಡಿಕೊಂಡರು.
ನಾಳೆಯಿಂದ ಸಂಸತ್ ಅಧಿವೇಶನ ಪ್ರಾರಂಭವಾಗಲಿದೆ. ಫೈನಾನ್ಸ್ ಬಿಲ್, ಬಜೆಟ್ ಸೇರಿದಂತೆ ಅನೇಕ ಸಂಗತಿಗಳನ್ನು ಪಾಸ್ ಮಾಡಲಿದ್ದೇವೆ. ನಾವು ಯಾವುದೇ ಚರ್ಚೆಗೆ ಸಿದ್ಧರಿದ್ದೇವೆ. ಸೂಸೂತ್ರವಾಗಿ ಅಧಿವೇಶನ ನಡೆಯಲಿ. ಸಂಸತ್ ಚರ್ಚೆ ಮಾಡೋಕೆ ಇರೋದು. ಎಲ್ಲರೂ ಸಹಕಾರ ಕೊಡಬೇಕಿದೆ. ದೆಹಲಿ ಗಲಭೆ ವಿಚಾರವಾಗಿಯೂ ಚರ್ಚೆ ಮಾಡಲಿದ್ದೇವೆ ಎಂದರು.
ಜನರನ್ನು ತಪ್ಪು ದಾರಿಗೆಳೆದು ಹಿಂಸೆಗೆ ಪ್ರಚೋದನೆ ನೀಡಲಾಗಿದೆ. ಸಿಎಎ ಮಸೂದೆಯನ್ನು ಹಿಂದೆ ಮನಮೋಹನ್ ಸಿಂಗ್ ಇದ್ದಾಗ ಮಂಡಿಸಿದ್ರು. ರಾಜಸ್ಥಾನದ ಅಂದಿನ ಕಾಂಗ್ರೆಸ್ ಸಿಎಂ ಕೂಡ ಪತ್ರ ಬರೆದಿದ್ದರು. ಇಂದು ಕಾಂಗ್ರೆಸ್ ನಾಯಕರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ. ಸಿಎಎಯಿಂದ ದೇಶದ ನಾಗರಿಕರಿಗೆ ಸಮಸ್ಯೆ ಇಲ್ಲ ಎಂದರು.