ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನಲ್ಲಿ ಇತ್ತೀಚಿಗೆ ಆಲಿಕಲ್ಲು ಸಹಿತ ಮಳೆ ಸುರಿದಿದ್ದು, ಅಪಾರ ಪ್ರಮಾಣದ ಭತ್ತದ ಬೆಳೆ ನಾಶವಾಗಿದೆ. ಕಟಾವಿನ ಹಂತಕ್ಕೆ ಬಂದಿದ್ದ ಈ ಬೆಳೆ ನಾಶದಿಂದ ರೈತಾಪಿ ವರ್ಗ ಕಂಗಾಲಾಗಿದೆ. ಎರಡೇ ದಿನಗಳಲ್ಲಿ ಈ ಬೆಳೆ ನಷ್ಟದ ಸರ್ವೇ ಕಾರ್ಯವನ್ನ ಪೂರ್ಣಗೊಳಿಸಿ ರೈತಾಪಿ ವರ್ಗದವರ ಮೆಚ್ಚುಗೆಗೆ ಜಿಲ್ಲಾಡಳಿತ ಪಾತ್ರವಾಗಿದೆ.
ಜಿಲ್ಲಾದ್ಯಂತ ಅಂದಾಜು 2,361 ಹೆಕ್ಟೇರ್ ಪ್ರದೇಶ ವ್ಯಾಪ್ತಿಯಲ್ಲಿ ಭತ್ತದ ಬೆಳೆ, ಅಂದಾಜು 36.98 ಹೆಕ್ಟೇರ್ ಪ್ರದೇಶಲ್ಲಿ ನಾನಾ ತೋಟಗಾರಿಕೆ ಬೆಳೆ ನಷ್ಟ ಉಂಟಾಗಿದೆ. ಅದರಲ್ಲಿ ಸಿರುಗುಪ್ಪ ಭಾಗದಲ್ಲೇ 2,014 ಹೆಕ್ಟೇರ್ ಪ್ರದೇಶ ಭತ್ತದ ಬೆಳೆ ನಷ್ಟ ಉಂಟಾಗಿದೆ ಎಂದು ತೋಟಗಾರಿಕೆ ಮತ್ತು ಕೃಷಿ ಇಲಾಖೆಯು ಅಂದಾಜಿಸಿದೆ.
ಕೇಂದ್ರ ಸರ್ಕಾರಕ್ಕೆ ವರದಿ
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ನಕುಲ್ ಮಾತನಾಡಿ, ಜಿಲ್ಲೆಯ ಹೂವಿನಹಡಗಲಿ, ಹರಪನಹಳ್ಳಿ ಹಾಗೂ ಸಿರುಗುಪ್ಪ ತಾಲೂಕಿಲ್ಲಿ ಅಕಾಲಿಕ ಮಳೆ ಸುರಿದಿತ್ತು. ಅಂದಾಜು 304 ಹೆಕ್ಟೇರ್ ಮಾತ್ರ ಬೆಳೆ ನಷ್ಟ ಸಂಭವಿಸಿತ್ತು. ಅದರ ಪರಿಹಾರದ ಹಣವು ಈ ವಾರದಲ್ಲಿ ಆಯಾ ಬೆಳೆ ನಷ್ಟಕ್ಕೆ ಗುರಿಯಾದವರ ಉಳಿತಾಯ ಖಾತೆಗೆ ಜಮೆಯಾಗಲಿದೆ. ಆದರೆ, ಕಳೆದ ನಾಲ್ಕೈದು ದಿನಗಳ ಹಿಂದಷ್ಟೇ ಸುರಿದ ಆಲಿಕಲ್ಲು ಮಳೆಯು ಸಿರುಗುಪ್ಪ ರೈತರನ್ನ ಅತೀವ ಸಂಕಷ್ಟಕ್ಕೀಡು ಮಾಡಿದೆ. ಹೀಗಾಗಿ, ಜಂಟಿ ಸರ್ವೇ ಕಾರ್ಯವನ್ನ ಕೇವಲ ಎರಡೇ ದಿನಗಳಲ್ಲಿ ಮಾಡಲಾಗಿದ್ದು, ಇದನ್ನೂ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು ಎಂದರು.
ಆರೆಂಜ್ ಝೋನ್ನಲ್ಲಿ ಗಣಿ ಜಿಲ್ಲೆ
ಜಿಲ್ಲೆಯಲ್ಲಿ 13 ಕೊರೊನಾ ಪಾಸಿಟಿವ್ ಪ್ರಕರಣಗಳಿದ್ದವು. ಆ ಪೈಕಿ ಐದು ಮಂದಿಯನ್ನ ಐಸೊಲೇಷನ್ನಿಂದ ಬಿಡುಗಡೆಗೊಳಿಸಿ ಹೋಮ್ ಕ್ವಾರಂಟೈನ್ನಲ್ಲಿ ಇಡಲಾಗಿದೆ. 14 ದಿನಗಳ ನಂತರ ಅವರನ್ನ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅದಾದ ನಂತರ ಅವರೇ ಮುಂದಿನ 14 ದಿನಗಳ ಕಾಲ ಆರೋಗ್ಯ ಇಲಾಖೆಯ ಸಹಾಯವಾಣಿ ಕೇಂದ್ರಕ್ಕೆ ಕರೆ ಮಾಡಿ ತಮ್ಮ ಆರೋಗ್ಯದ ಸ್ಥಿತಿಗತಿ ಕುರಿತು ಮಾಹಿತಿ ನೀಡಬೇಕು.
ಪ್ರಾಥಮಿಕ ಸಂಪರ್ಕದ 204 ಹಾಗೂ ದ್ವಿತೀಯ ಸಂಪರ್ಕ ಹೊಂದಿದ್ದ 248 ಮಂದಿಯನ್ನ ಎರಡು ಹಂತಗಳಲ್ಲಿ ಪರೀಕ್ಷೆ ಮಾಡಲಾಗಿದ್ದು, ಅವರೆಲ್ಲರಿಗೂ ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
ಸಡಿಲಿಕೆ ಯಾಕೆ ಮಾಡಲಾಯಿತು?
ಬಡ ಮತ್ತು ಕೂಲಿ ಕಾರ್ಮಿಕರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ಹೀಗಾಗಿ ಲಾಕ್ಡೌನ್ ಸಡಿಲಿಕೆ ಮಾಡಲಾಗಿದೆ. ನರೇಗಾ ಸೇರಿದಂತೆ ಕೆಲ ನಿಯಮಬದ್ಧ ಕಾಮಗಾರಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಹೋಟೆಲ್, ದಿನಸಿ ಹಾಗೂ ಬಿಡಿ ಬಟ್ಟೆ ಅಂಗಡಿಗಳು ಮಾತ್ರ ತೆರೆಯುವಂತೆ ಸೂಚನೆ ನೀಡಲಾಗಿದೆ. ಉಳಿದಂತೆ ಲಾಕ್ಡೌನ್ ಮುಂದುವರಿಯುತ್ತೆ. ಸಾರಿಗೆ ಸಂಚಾರ ಇಲ್ಲ. ಲಾಕ್ಡೌನ್ ನಿಯಮ ಉಲ್ಲಂಘಿಸಿದ ಅಂದಾಜು 40ಕ್ಕೂ ಅಧಿಕ ಆಟೋಗಳನ್ನ ಸೀಜ್ ಮಾಡಲಾಗಿದೆ ಎಂದರು.