ಅರೆ ಎಲ್ಲಿ ನೋಡಿದ್ರೂ ಪಾರಿವಾಳಗಳ ಪರಿವಾರ.. ನಾವು ಪೋಸ್ಟ್ ಆಫೀಸ್ಗೆ ಬಂದಿದ್ದೀವಾ? ಇಲ್ಲಾ, ಯಾವುದಾದ್ರೂ ಪಕ್ಷಿಧಾಮಕ್ಕೆ ಬಂದಿದ್ದೀವಾ? ಅಂದುಕೊಂಡ್ರೆ ತಪ್ಪಾಗಲಾರದು.
ಹೌದು.. ನಾವೀಗ ತಿಳಿದುಕೊಳ್ಳುತ್ತಿರುವುದು ಬಳ್ಳಾರಿಯ ಅಂಚೆ ಕಚೇರಿಯನ್ನ.. ಪಾರಂಪರಿಕ ಕಚೇರಿಯ ಅಧೀಕ್ಷಕ ಕೆ. ಬಸವರಾಜ 2016ರಲ್ಲಿ ಮೊದಲಿಗೆ 4 ಪಾರಿವಾಳಗಳನ್ನ ತಂದು ಕಚೇರಿಯಲ್ಲೇ ಸಾಕಲು ಆರಂಭಿಸಿದರು. ಇದೀಗ ಅವುಗಳ ಸಂಖ್ಯೆಯು ಹದಿನಾರಕ್ಕೇರಿದೆ. ಅವುಗಳೊಂದಿಗೆ ಜಿಲ್ಲೆಯ ಸಂಡೂರಿನಿಂದ ಎರಡು ಮೊಲಗಳನ್ನು ಖರೀದಿಸಿ ತಂದಿದ್ದಾರೆ. ಮೊಲಗಳ ಸಂಖ್ಯೆ ಏಳಕ್ಕೇರಿದೆ.
ಕಚೇರಿ ಕೆಲಸ ಆರಂಭವಾಗುತ್ತಿದ್ದಂತೆ ಗೂಡಿನಲ್ಲಿದ್ದ ಪಾರಿವಾಳಗಳನ್ನ ಹಾರಿಬಿಡಲಾಗುತ್ತೆ. ಸಂಜೆವರೆಗೂ ಹೊರಗೆ ಹಾರಿ, ನಲಿದು, ಸಂಜೆಯಾದ ಬಳಿಕ ಕಾಳು ಕಡಿ ತಿಂದು ಕಾರಂಜಿಯಲ್ಲಿನ ನೀರು ಕುಡಿದು ಮರಳಿ ಗೂಡಿಗೆ ಸೇರುತ್ತವೆ. ಅವುಗಳ ನಿರ್ವಹಣೆಯನ್ನು ಅಂಚೆ ಕಚೇರಿ ಸಿಬ್ಬಂದಿ ಕೃಷ್ಣಮೂರ್ತಿಯವರೇ ಮಾಡುತ್ತಾರೆ. ಬಹು ವಿಶಾಲವಾದ ಈ ಪಾರಂಪರಿಕ ಕಟ್ಟಡದ ಚಾವಣಿಯ ಪೊಟರೆಗಳಲ್ಲಿ ಅವುಗಳ ಚಿಲಿಪಿಲಿಯನ್ನ ಕಣ್ತುಂಬಿಕೊಳ್ಳಲು ಖುಷಿ ಕೊಡುತ್ತೆ ಅಂತಾರೆ ಕಚೇರಿಗೆ ಭೇಟಿ ನೀಡುವವರು.
ನಾವು ಕಚೇರಿಯ ಕೆಲಸಗಳ ಒತ್ತಡವನ್ನು ಮನೆಗೆ ಹೋದ ಬಳಿಕ ಮಕ್ಕಳ ಮುಖ ನೋಡಿ ಮರೆಯುತ್ತೇವೆಯೋ, ಹಾಗೆ ಇಲ್ಲಿನ ಪಾರಿವಾಳಗಳ ಚಿಲಿಪಿಲಿ ಕಲರವ ಕೇಳುತ್ತಾ, ಅವುಗಳನ್ನು ನೋಡುತ್ತಾ ಕಚೇರಿಯ ಒತ್ತಡವನ್ನು ಮರೆಯುತ್ತೇವೆ ಅಂತಾರೆ ಅಂಚೆ ಇಲಾಖೆ ಸಿಬ್ಬಂದಿ ಜ್ಯೋತಿ.
ಇನ್ನು ಆರಂಭದಲ್ಲಿ ಎರಡು ಮೊಲಗಳನ್ನು ತರಲಾಗಿತ್ತು. ಅವುಗಳ ಸಂತತಿಯೂ ಏಳಕ್ಕೇರಿದ್ದು, ಅವುಗಳನ್ನು ಪ್ರೀತಿಯಿಂದ ನೋಡಿಕೊಳ್ಳಲಾಗುತ್ತಿದೆ ಕಚೇರಿ ಸಿಬ್ಬಂದಿ.