ಬಳ್ಳಾರಿ: ಸಾಮಾಜಿಕ ಅಂತರ ಪಾಲಿಸುವ ಲಾಕ್ಡೌನ್ ಉದ್ದೇಶ ವಿವರಿಸಲು ಬಂದ ಪೊಲೀಸರಿಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ, ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತಾರಾನಗರದಲ್ಲಿ ನಡೆದಿದೆ.
144ಸೆಕ್ಷನ್ ಉಲ್ಲಂಘನೆ ಹಾಗೂ ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆಧಾರದ ಮೇರೆಗೆ ನಾಲ್ವರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಇದರಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಗ್ರಾಪಂ ಸದಸ್ಯ ಮಂಜುನಾಥ ಹಾಗೂ ಅಲ್ತಾಫ್ ಎನ್ನುವವರನ್ನು ಬಂಧಿಸಲಾಗಿದೆ. ನಿಂಗಪ್ಪ, ಗಣೇಶ ಎಂಬುವವರನ್ನು ಶೀಘ್ರವಾಗಿ ಬಂಧಿಸಲಾಗುವುದು. ಇವರ ವಿರುದ್ಧ ಸೆಕ್ಷನ್ 353,188, 270, 341, 504 R/W ಹಾಗೂ ಇನ್ನೀತರ ಸೆಕ್ಷನ್ಗಳಡಿ ಸಂಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಎಸ್ಪಿ ಸಿ.ಕೆ. ಬಾಬಾ ತಿಳಿಸಿದ್ದಾರೆ.
ಘಟನೆಯ ವಿವರ:
ಪೊಲೀಸ್ ಮುಖ್ಯಪೇದೆ ಮಂಜುನಾಥ ಮತ್ತು ಪೊಲೀಸ್ ಪೇದೆ ಕೆ. ಜಾತಪ್ಪ ಅವರನ್ನು ತಾರಾನಗರ ಗ್ರಾಮದಲ್ಲಿ ಮಾ. 29ರಂದು ಬಿ/ಬಿ ಕರ್ತವ್ಯಕ್ಕೆ ನೇಮಿಸಲಾಗಿತ್ತು. ಅವರಿಬ್ಬರು ಬೆಳಗ್ಗೆ 6 ರಿಂದ ಗ್ರಾಮದಲ್ಲಿ ಕರ್ತವ್ಯ ಮಾಡುತ್ತಿರುವ ಸಂದರ್ಭದಲ್ಲಿ 11 ಗಂಟೆ ಸುಮಾರಿಗೆ ಗ್ರಾಮದಲ್ಲಿ ಗಸ್ತು ತಿರುಗುತ್ತಿರುವಾಗ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸುಮಾರು ಎಂಟೆತ್ತು ಜನರು ಮಾತನಾಡುತ್ತಾ ನಿಂತಿದ್ದರು. ಆ ಸಂದರ್ಭದಲ್ಲಿ ಪೊಲೀಸರಿಬ್ಬರು ಅವರ ಹತ್ತಿರ ಹೋಗಿ ಕೊರೊನಾ ವೈರಸ್ ಹರಡುವ ಸಂಭವ ಇರುವುದರಿಂದ ಸರ್ಕಾರವು 144 ಸಿ.ಆರ್.ಪಿ.ಸಿ. ಆದೇಶ ಜಾರಿಯಲ್ಲಿರುತ್ತದೆ. ಆದ್ದರಿಂದ ತಾವುಗಳು ತಮ್ಮ ತಮ್ಮ ಮನೆಗಳಿಗೆ ಹೋಗಿ ಎಂದು ಮನವಿ ಮಾಡಿದ್ದಾರೆ.
![ಬಂಧಿತ ಆರೋಪಿ](https://etvbharatimages.akamaized.net/etvbharat/prod-images/kn-05-bly-290320-sppressmeetabourcrime-ka10007_29032020200417_2903f_1585492457_538.jpg)
ಜನರು ಮನೆಗಳಿಗೆ ಹೋಗದೇ ಅಲ್ಲೇ ಇದ್ದುದರಿಂದ ಪೊಲೀಸ್ ಪೇದೆ ಜಾತಪ್ಪ ತನ್ನ ಮೊಬೈಲ್ನಿಂದ ವಿಡಿಯೋ ಮಾಡುತ್ತಿರುವಾಗ ಅಲ್ಲಿ ಸೇರಿದ್ದ ಜನರಲ್ಲಿ ಮೂವರು ಪೇದೆ ಮೇಲೆ ಹಲ್ಲೆ ಮಾಡಿದ್ದಾರೆ. ಈ ಮೂಲಕ ಸರ್ಕಾರದ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಸ್ಥಳದಲ್ಲಿದ್ದ ಆ ವ್ಯಕ್ತಿಗಳು ನಿಂಗಪ್ಪ, ಅಲ್ತಾಫ್,ಗಣೇಶ್ ಎಂದು ಪೊಲೀಸರಿಬ್ಬರು ನೀಡಿದ ದೂರಿನಲ್ಲಿ ದಾಖಲಾಗಿದೆ.
![ಬಂಧಿತ ಆರೋಪಿ](https://etvbharatimages.akamaized.net/etvbharat/prod-images/kn-05-bly-290320-sppressmeetabourcrime-ka10007_29032020200417_2903f_1585492457_969.jpg)
ನಂತರ ಇನ್ನೊಬ್ಬ ಗ್ರಾಪಂ ಸದಸ್ಯ ಮಂಜುನಾಥ ಎನ್ನುವವರು ಆಗಮಿಸಿ ನಿನ್ನೊಬ್ಬ ಸಾಮಾನ್ಯ ಪೊಲೀಸ್ ಕಾನ್ಸಟೇಬಲ್. ನಮ್ಮನ್ನು ಏನು ಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ., ನೀವೇನು ಬಂದು ಹೇಳೋದು ಅಂತಾ ಬಾಯಿಗೆ ಬಂದಂತೆ ಬೈದಿದ್ದಾರೆ ಎಂದು ಅವರು ಉಲ್ಲೇಖಿಸಿದ್ದಾರೆ. ಈ ಮಾಹಿತಿ ತಿಳಿಯುತ್ತಲೇ ಸಂಡೂರು ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದಾರೆ. ಅವರು ಬರುತ್ತಲೇ ಜನ ಅಲ್ಲಿಂದ ಕಾಲ್ಕಿತ್ತಿದ್ದಾರೆ.