ಬಳ್ಳಾರಿ: ಕೊರೊನಾ ವೈರಸ್ ಎಫೆಕ್ಟ್ನಿಂದಾಗಿ ಇಡೀ ದೇಶವೇ ಲಾಕ್ ಡೌನ್ ಆದ ಹಿನ್ನೆಲೆಯಲ್ಲಿ ಗಣಿನಾಡು ಬಳ್ಳಾರಿಯ ದಶ ದಿಕ್ಕುಗಳ ವಾಹನ ಸಂಚಾರಕ್ಕೂ ಜಿಲ್ಲೆಯ ಪೊಲೀಸರು ತಾತ್ಕಾಲಿಕ ಬ್ರೇಕ್ ಹಾಕಿದ್ದಾರೆ.
ಬಳ್ಳಾರಿ ನಗರದ ನಾನಾ ಭಾಗದ ಅಡ್ಡರಸ್ತೆಗಳಿಂದ ಪ್ರಮುಖ ವೃತ್ತಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಕಟ್ಟಿಗೆಯ ಸೇತುವೆ ನಿರ್ಮಿಸುವ ಮುಖೇನ ತಾತ್ಕಾಲಿಕ ವಾಹನ ಸಂಚಾರಕ್ಕೆ ಬ್ರೇಕ್ ಹಾಕಿದ್ದಾರೆ. ಹೀಗಾಗಿ ಬೆಕಾ ಬಿಟ್ಟಿ ರಸ್ತೆಯಲ್ಲಿ ಓಡಾಟ ನಡೆಸುವ ಬೈಕ್ ಸವಾರರು ಪ್ರಮುಖ ರಸ್ತೆಯೊಂದರ ಮಾರ್ಗವಾಗಿಯೇ ತಮ್ಮ ಕಾರ್ಯಕ್ಕೆ ತೆರಳಬೇಕಾಗಿದೆ. ಅಲ್ಲಿ ಕೂಡ ಬಿಗಿಯಾದ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ. ಈ ರಸ್ತೆಯ ಮೂಲಕ ಹಾದು ಹೋಗುವ ಪ್ರತಿಯೊಬ್ಬರನ್ನೂ ಕೂಡ ವಿಚಾರಿಸಿಯೇ ಮುಂದಕ್ಕೆ ಕಳುಹಿಸಲಾಗುತ್ತದೆ.
ಬಳ್ಳಾರಿ ನಗರಕ್ಕೆ ಸಂಪರ್ಕ ಕಲ್ಪಿಸುವ ಡಾ.ರಾಜ್ ಬೈಪಾಸ್ ರಸ್ತೆ, ಹೊಸಪೇಟೆ ಬೈಪಾಸ್ ರಸ್ತೆ, ಮೋಕಾ ರಸ್ತೆ, ಸಿರುಗುಪ್ಪ ರಸ್ತೆ ಸೇರಿ ನಗರದೊಳಗಿನ ಎಸ್ಪಿ ವೃತ್ತ, ಮೋತಿ ವೃತ್ತ, ಬೆಂಗಳೂರು ರಸ್ತೆ, ಸತ್ಯನಾರಾಯಣಪೇಟೆ ರಸ್ತೆ, ತಾಳೂರು ರಸ್ತೆ, ಕಪ್ಪಗಲ್ಲು ರಸ್ತೆ, ಬೆಂಗಳೂರು ರಸ್ತೆ, ಎಪಿಎಂಸಿ ಮಾರುಕಟ್ಟೆ ರಸ್ತೆ, ತೇರುಬೀದಿ ರಸ್ತೆ, ಬಸವೇಶ್ವರ ನಗರ ರಸ್ತೆ, ಪಾರ್ವತಿನಗರ ರಸ್ತೆ, ಗಾಂಧಿನಗರ ರಸ್ತೆ, ಕೌಲ್ ಬಜಾರ್ ಸೇರಿದಂತೆ ಇನ್ನಿತರೆ ಸಂದಿ-ಗೊಂದಿಗಳ ರಸ್ತೆಗಳ ಸಂಪರ್ಕದಲ್ಲಿ ವಾಹನಗಳ ಸಂಚಾರಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಹಾಕಲಾಗಿದೆ.
ರಸ್ತೆಯಲ್ಲಿ ವಿನಾಕಾರಣ ತಿರುಗಾಡಬೇಡಿ ಎಂದು ಅದೆಷ್ಟೋ ಬಾರಿ ಮನವಿ ಮಾಡಿಕೊಂಡ್ರೂ ಸಾರ್ವಜನಿಕರು ತಿರುಗಾಡೋದನ್ನ ನಿಲ್ಲಿಸದ ಕಾರಣ ಜಿಲ್ಲೆಯ ಪೊಲೀಸರು ಈ ಕಠಿಣವಾದ ನಿರ್ಧಾರಕ್ಕೆ ಬಂದಿದ್ದಾರೆ. ಬ್ಯಾರಿಕೇಡ್ ಹಾಕಿದ್ರೆ ಅದನ್ನು ತೆಗೆದು ಬರುವ ಜನರ ಸಂಖ್ಯೆ ಹೆಚ್ಚಾದ ಹಿನ್ನೆಲೆ ಇದೀಗ ಬಳ್ಳಾರಿಯ ಬಹುತೇಕ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿದೆ.