ಬಳ್ಳಾರಿ: ಗಣಿನಾಡಿನ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ಮಕ್ಕಳು, ಯುವಕರು, ಯುವತಿಯರು ಟೆಲಿಸ್ಕೋಪ್, ಸುರಕ್ಷಕ ಕನ್ನಡಕಗಳು, ಪಿನ್ ಹೋಲ್ ಕ್ಯಾಮರಾ ಹಾಗು ಬಾಲ್ ಮೀರರ್ಗಳ ಮೂಲಕ ಆಗಸದಲ್ಲಿ ನಡೆದ ಅಪರೂಪದ ಖಗೋಳ ಕೌತುಕವನ್ನು ಕಣ್ತುಂಬಿಕೊಂಡರು.
ವಿಜ್ಞಾನ ಕೇಂದ್ರದ ಕ್ಯುರೇಟರ್ ಶಿವಕುಮಾರ್ ಮಾತನಾಡಿ, ಸೂರ್ಯಗ್ರಹಣ ಬೆಳಿಗ್ಗೆ 10 ಗಂಟೆ 10 ನಿಮಿಷದಿಂದ ಮಧ್ಯಾಹ್ನ 1 ಗಂಟೆ 34 ನಿಮಿಷದವರೆಗೆ ನಡೆಯಿತು. ಈ ಸಮಯದಲ್ಲಿ ಬಳ್ಳಾರಿ ನಾಗರಿಕರಿಗೆ ಸುರಕ್ಷತಾ ಸಾಮಗ್ರಿಗಳ ಮೂಲಕ ಗ್ರಹಣ ವೀಕ್ಷಣೆ ಮಾಡಲು ಅವಕಾಶ ಮಾಡಿಕೊಟ್ಟಿದೆ. ಜಿಲ್ಲೆಯಲ್ಲಿ ಶೇ 44 ರಷ್ಟು ಗ್ರಹಣ ಗೋಚರಿಸಿದೆ ಎಂದರು.
ಗ್ರಹಣ ವೀಕ್ಷಣೆ ಮಾಡಲು ಬಂದ ಸಾರ್ವಜನಿಕರಿಗೆ ಉಪಹಾರದ ವ್ಯವಸ್ಥೆಯನ್ನು ಸಹ ಮಾಡಲಾಗಿತ್ತು. ಗ್ರಹಣದ ಸಮಯದಲ್ಲಿ ಆಹಾರ, ನೀರು ಸೇವನೆ ಮಾಡಬಾರದು ಎನ್ನುವ ಮೂಢನಂಬಿಕೆ ಹೊಗಲಾಡಿಸುವ ಉದ್ದೇಶಿಂದ ಈ ವ್ಯವಸ್ಥೆ ಮಾಡಲಾಗಿತ್ತು.
ಬಳ್ಳಾರಿ ನಗರದ ಕಲ್ಯಾಣ ಮಠದ ಸ್ವಾಮಿಗಳು ಸಹ ಆಗಮಿಸಿ ಗ್ರಹಣ ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು. ಪತಂಜಲಿ ಯೋಗ ಸಮಿತಿಯ ಸದಸ್ಯರು, ಸಾರ್ವಜನಿಕರು, ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಅಧಿಕಾರಿಗಳು, ಸಿಬ್ಬಂದಿ, ಮಕ್ಕಳು, ಯುವಕರು ಈ ವೇಳೆ ಉಪಸ್ಥಿತರಿದ್ದರು.