ಬಳ್ಳಾರಿ: ಸಿರುಗುಪ್ಪ ರಸ್ತೆಯ ಹವಂಭಾವಿ ಪ್ರದೇಶದಲ್ಲಿರುವ ಸಮಾಜ ಕಲ್ಯಾಣ ಖಾತೆ ಸಚಿವ ಬಿ.ಶ್ರೀರಾಮುಲು ನಿವಾಸದೆದುರು ಗಂಟೆಗಟ್ಟಲೆ ಕಾದು,ಕಾದು ಸಾರ್ವಜನಿಕರು ಸುಸ್ತಾಗಿದ್ದರು.
ಸಮಾಜ ಕಲ್ಯಾಣ ಖಾತೆಯ ಸಚಿವರಾಗಿ ಅಧಿಕಾರ ವಹಿಸಿಕೊಂಡು, ಮೊದಲ ಬಾರಿಗೆ ಬಳ್ಳಾರಿಯ ತಮ್ಮ ನಿವಾಸಕ್ಕೆ ಆಗಮಿಸಿದ್ದ ಸಚಿವರನ್ನು ಭೇಟಿ ಮಾಡಲು ಸಾಕಷ್ಟು ಅಭಿಮಾನಿಗಳು ಬಂದಿದ್ದರು. ಸಾಕಷ್ಟು ಸಮಸ್ಯೆಗಳನ್ನು ಹೊತ್ತು ಮೊಳಕಾಲ್ಮೂರು ಕ್ಷೇತ್ರದಿಂದ ಮಹಿಳೆಯರು, ಯುವಕರು ಕೂಡಾ ಇಲ್ಲಿಗೆ ಬಂದಿದ್ದರು. ಇವರೆಲ್ಲ ಬೆಳಿಗ್ಗೆ 10 ಗಂಟೆಗೆ ಸಚಿವರ ನಿವಾಸಕ್ಕಾಗಮಿಸಿ, ರಾಮುಲು ದರ್ಶನಕ್ಕಾಗಿ ಕಾದು ಕುಳಿತಿದ್ದರು.
ಪ್ರತಿ ಗಂಟೆಗೊಮ್ಮೆ ಸಚಿವರ ಆಪ್ತ ಸಹಾಯಕರ ಬಳಿ ಹೋಗಿ 'ಸಾಹೇಬ್ರು ಯಾವಾಗ ಬರುತ್ತಾರೆ ಸರ್' ಅಂತ ಕೇಳುತ್ತಿದ್ದರು. ಅವರು ಅದಕ್ಕೆ 'ಇನ್ನೇನು ಐದು ನಿಮಿಷದಲ್ಲಿ ಬಂದೇ ಬಿಡುತ್ತಾರೆ' ಅಂತ ಹೇಳಿ ಕಳುಹಿಸುತ್ತಿದ್ದರು. ಬೆಳಿಗ್ಗೆ 11, ಮಧ್ಯಾಹ್ನ 12 ಹಾಗೂ ಮಧ್ಯಾಹ್ನ ಒಂದು ಗಂಟೆಯಾಯಿತು. ಜನರು ತಮ್ಮ ಮೊಬೈಲ್ ಅಥವಾ ಕೈಗೆ ಕಟ್ಟಿದ್ದ ಕೈಗಡಿಯಾರವನ್ನು ನೋಡುತ್ತಲೇ 'ಯಾವಾಗ ಬರುತ್ತಾನೋ ಇವನು..' ಅಂತ ಗೊಣಗುತ್ತಾ ಇದ್ದರು. ಜನರ ಹೊಟ್ಟೆಯೊಳಗೆ ಹಸಿವು ಮೆಲ್ಲನೆ ಶುರುವಾಯಿತಾದ್ರೂ ಸಚಿವ ಶ್ರೀರಾಮುಲು ಮಾತ್ರ ಮನೆಯಿಂದ ಹೊರಗಡೆ ಬರಲೇ ಇಲ್ಲ.
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಕ್ಷೇತ್ರದ ಮಹಿಳೆಯೊಬ್ಬರು, ಕಾದು ಕಾದು ಸುಸ್ತಾಗಿ ಮಾಧ್ಯಮದವರ ಬಳಿ ಬಂದು 'ಯಾವಾಗ ಬರುತ್ತಾರೆ ಸಚಿವರು?' ಅಂತ ಕೇಳಿದ್ರು. ಅಲ್ಲಿದ್ದ ಕೆಲ ಮಾಧ್ಯಮದವರು 'ನಮಗೇನೇ ಐದು ನಿಮಿಷಗಳಲ್ಲಿ ಬಂದು ಬಿಡುತ್ತಾರೆ ಅಂತ ಅವಾಗಿಂದಲೂ ಹೇಳುತ್ತಿದ್ದಾರೆ' ಅಂದ್ರು. ಆಗ ಆ ಮಹಿಳೆ, 'ಬಳ್ಳಾರಿ ಜಿಲ್ಲೆಯ ಮಿನಿಸ್ಟರ್ಗಳೇ ಹೀಗೇನಾ' ಅಂತಾ ನಿರಾಶೆಯಿಂದ ಕೇಳಿಬಿಟ್ಟರು. 'ಹೌದು, ಇಲ್ಲಿ ಹೀಗೇನೇ..' ಅಂತ ಮಾಧ್ಯಮದವರು ತಲೆಯಾಡಿಸಿದ್ರು. 'ನಮ್ಮ ಕಡೆಯಲ್ಲಾ ಹೀಗಿಲ್ಲ ನೋಡಿ'. 'ಹೌದಾ? ಯಾವ ಊರು ನಿಮ್ದು?' ಅಂತ ಕೇಳಿದ್ರು ಮಾಧ್ಯಮದವರು. 'ನಮ್ದು ಬೆಳಗಾವಿ. ಸಾರ್ವಜನಿಕರು ಬರೋದಕ್ಕಿಂತಲೂ ಮೊದಲೇ ಮಿನಿಸ್ಟರ್ ಹಾಜರಿರುತ್ತಾರೆ ನೋಡಿ' ಎಂದ್ರು. ಅಷ್ಟೊತ್ತಿಗಾಗಲೇ ಮಧ್ಯಾಹ್ನ 1 ಗಂಟೆ 45 ನಿಮಿಷ ಆಗಿತ್ತು.
ಸಚಿವ ಶ್ರೀರಾಮುಲು ಕೊನೆಗೂ ಮನೆಯ ಮಹಡಿ ಮೇಲಿಂದ ಕೆಳಗಿಳಿದರು. ಹೊರಾಂಗಣದಲ್ಲಿದ್ದ ಅಧಿಕಾರಿ ವರ್ಗದವರ ಬಳಿ ಕೆಲಕಾಲ ಚರ್ಚಿಸಿ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ಬಂದಾಗ ಸಮಯ 2 ಗಂಟೆಯಾಗಿತ್ತು. ಈ ನಡುವೆ ಅಭಿಮಾನಿಗಳಿಂದ ಹೂವಿನ ಹಾರ, ತುರಾಯಿ ಹಾಗೂ ಮೈಸೂರು ಪೇಟ ತೋಡಿಸೋರ ಸಂಖ್ಯೆಯಂತೂ ಹೇಳತೀರದಾಗಿತ್ತು. ಇವುಗಳ ಮಧ್ಯೆಯೂ ಜೀವನದ ಕಷ್ಟ- ಕಾರ್ಪಣ್ಯಗಳನ್ನು ಹೊತ್ತು ತಂದೋರ ಗತಿಯಂತೂ ಅಕ್ಷರಶ: ನರಕಯಾತನೆಯೇ ಆಗಿತ್ತು.
ಸಚಿವ ಶ್ರೀರಾಮುಲು ಅವರ ಮನೆಯಲ್ಲಿ ಕಾಯುತ್ತಾ ಕುಳಿತಿದ್ದ ಸಾರ್ವಜನಿಕರ ಬಾಯಾರಿಕೆ ನೀಗಿಸಲು ಕನಿಷ್ಠ ಕುಡಿಯುವ ನೀರಿನ ವ್ಯವಸ್ಥೆಯೂ ಅಲ್ಲಿರಲಿಲ್ಲ.!