ಬಳ್ಳಾರಿ: ಈ ಮಹಾಮಾರಿ ಕೊರೊನಾ ಸೋಂಕು ನಮ್ಮನ್ನು ಬಿಟ್ಟು ಹೋಗಲ್ಲ. ಹಾಗಾಗಿ ನಾವು ಅದರ ಜೊತೆಗೇ ಪಯಣ ಬೆಳೆಸಬೇಕೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಹೇಳಿದ್ದಾರೆ.
ನಗರದ ಮಿಲ್ಲರ್ ಪೇಟೆಯಲ್ಲಿಂದು ಮಾಜಿ ಮೇಯರ್ ಇಬ್ರಾಹಿಂ ಬಾಬು ಅವರ ಸಾರಥ್ಯದಲ್ಲಿ ಆಶಾ ಕಾರ್ಯಕರ್ತೆಯರು, ವೈದ್ಯರಿಗೆ ರೇಷನ್ ಕಿಟ್ ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಕೇಂದ್ರ ಸರ್ಕಾರದಿಂದ ನಾಲ್ಕನೇ ಹಂತದ ಲಾಕ್ಡೌನ್ ಗೈಡ್ಲೈನ್ಸ್ ಇನ್ನೂ ಬರಬೇಕಿದ್ದು, ಕೆಲ ರಾಜ್ಯಗಳಲ್ಲಿ ಯಥಾಸ್ಥಿತಿ ಮುಂದುವರೆಸುವ ಚರ್ಚೆ ನಡೆದಿದೆ ಎಂದರು.
ರಾಜ್ಯದ ಪರಿಸ್ಥಿತಿಯ ಕುರಿತಂತೆ ಪ್ರಧಾನಿ ನರೇಂದ್ರ ಮೋದಿಯವರು ಸಿಎಂ ಯಡಿಯೂರಪ್ಪನವರಿಗೆ ಸಲಹೆ ಕೊಟ್ಟಿದ್ದಾರೆ. ಗ್ರೀನ್, ಆರೆಂಜ್ ಝೋನ್ಗಳಲ್ಲಿ ಕೆಲವು ಸಡಿಲಿಕೆ ಮಾಡಿ ಜನಜೀವನಕ್ಕೆ ಅನುವು ಮಾಡಬೇಕಿದೆ. ಈ ಮಾಹಾಮಾರಿ ನಮ್ಮನ್ನು ಬಿಟ್ಟು ಹೋಗಲ್ಲ. ಅದರ ಜೊತೆ ನಾವು ಪ್ರಯಾಣ ಬೆಳೆಸಬೇಕಿದೆ. ಇನ್ನು, ಎರಡು- ಮೂರು ವರ್ಷ ನಾವು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ರಾಜ್ಯಕ್ಕೆ ಬರುವವರನ್ನ ಕಡ್ಡಾಯವಾಗಿ ಕ್ವಾರಂಟೈನ್ ಮಾಡಲು ತೀರ್ಮಾನಿಸಲಾಗಿದೆ ಎಂದು ಸಚಿವರು.
ಇನ್ನು, ಆರು ತಿಂಗಳಲ್ಲಿ ರಾಜ್ಯದಲ್ಲಿ 82 ಸಾವಿರ ಮಹಿಳೆಯರಿಗೆ ಹೆರಿಗೆಯಾಗಲಿದೆ. ಅವರಿಗೆ ತೊಂದರೆ ಆಗದಂತೆ ಎಲ್ಲಾ ರೀತಿಯ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಅದರಲ್ಲಿ ಕಂಟೇನ್ಮೆಂಟ್ ಝೋನ್ನಿಂದ ಬಂದವರನ್ನು ಕಡ್ಡಾಯವಾಗಿ ಟೆಸ್ಟ್ ಮಾಡಲಾಗುವುದು. ರಾಜ್ಯ ಸರ್ಕಾರ ಇಷ್ಟು ದಿನ ಜನರಿಗೆ ಏನು ಬೇಕೋ ಅದನ್ನೆಲ್ಲ ಮಾಡಿದೆ. ಇನ್ಮುಂದೆ ಜನರ ಸಹಕಾರ ಮುಖ್ಯವಾಗಿರುತ್ತದೆ ಎಂದರು.