ಬಳ್ಳಾರಿ: ಲೋಕಸಭಾ ಚುನಾವಣೆ ನಿಮಿತ್ತ ಗಣಿ ಜಿಲ್ಲೆಗೆ ಪ್ಯಾರಾ ಮಿಲಿಟರಿ ತುಕಡಿಯೊಂದು ಬರಲಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ರಂಗರಾಜನ್ ತಿಳಿಸಿದರು.
ಬಳ್ಳಾರಿ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಹನ್ನೆರಡು ಪ್ಯಾರಾ ಮಿಲಿಟರಿ ತಂಡಗಳ ಪೈಕಿ ಬಳ್ಳಾರಿ ಜಿಲ್ಲೆಯೂ ಕೂಡ ಒಳಗೊಂಡಿದೆ. ಸರಿಸುಮಾರು 240 ಮಂದಿ ಪ್ಯಾರಾ ಮಿಲಿಟರಿ ಪಡೆಯೊಂದಿದೆ. ಸೂಕ್ಷ್ಮ ಮತ್ತು ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಮಿಲಿಟರಿ ಪಡೆಯನ್ನು ನಿಯೋಜಿಸಲಾಗಿದೆ ಎಂದರು.
ಈ ಬಾರಿಯ ಬಳ್ಳಾರಿ ಲೋಕಸಭಾ ಕ್ಷೇತ್ರದ ಚುನಾವಣೆ ಸುಸೂತ್ರವಾಗಿ ಜರುಗಿಸುವ ನಿಟ್ಟಿನಲ್ಲಿ ಸಕಲ ತಯಾರಿ ನಡೆಸಲಾಗಿದೆ. ಗೂಂಡಾ ಕಾಯ್ದೆಯಡಿ ರೌಡಿ ಶೀಟರ್‍ಗಳಾಗಿರುವ 1650 ಜನರಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳುವುದಕ್ಕೆ ಸೂಚನೆ ನೀಡಲಾಗಿದೆ. ಈಗಾಗಲೇ ಸ್ಥಾಪಿಸಲಾಗಿರುವ ಚೆಕ್ಪೋಸ್ಟ್ಗಳಲ್ಲಿ ನಿರ್ಲಕ್ಷ್ಯ ತೋರುವ ಪೊಲೀಸ್ ಸಿಬ್ಬಂದಿ ಜೊತೆಗೆ ಮೇಲ್ವಿಚಾರಣೆ ಹೊಣೆ ಹೊತ್ತ ಇನ್‍ಸ್ಪೆಕ್ಟರ್‍ಗಳನ್ನು ಅಮಾನತು ಮಾಡಲಾಗುವುದು. ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು. ಈ ಚುನಾವಣೆ ಸಂಬಂಧ ಸಾರ್ವಜನಿಕರ ದೂರು ದುಮ್ಮಾನಗಳಿಗಾಗಿ ಚುನಾವಣಾ ಕೋಶ ಸ್ಥಾಪಿಸಲಾಗಿದೆ ಎಂದರು.