ಬಳ್ಳಾರಿ: ರೈಲುಗಳಲ್ಲಿ ಕಸಗೂಡಿಸುವ ಕಾಯಕಕ್ಕೆ ನೇಮಕವಾದ ನೌಕರರು ಸಮಯಾನುಸಾರ ಬಂದು ಕಸಗೂಡಿಸುತ್ತಾರೆಯೋ ಇಲ್ಲವೋ ಗೊತ್ತಿಲ್ಲ. ಆದರೆ, ಇಲ್ಲೊಬ್ಬ ಅನಾಥ ವಿಕಲಚೇತನ ವ್ಯಕ್ತಿ ಮಾತ್ರ ನಿತ್ಯ ಬಳ್ಳಾರಿ, ತೋರಣಗಲ್ಲು - ಹೊಸಪೇಟೆ ಮಾರ್ಗವಾಗಿ ಸಂಚರಿಸುತ್ತಿರುವ ರೈಲುಗಳಲ್ಲಿ ಕಸ ಗೂಡಿಸುವ ಕಾಯಕವನ್ನು ಮಾತ್ರ ನಿಷ್ಠೆಯಿಂದ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿ ಬಿಟ್ಟಿದೆ.
ಜಿಲ್ಲೆಯ ತೋರಣಗಲ್ಲು ರೈಲು ನಿಲ್ದಾಣದ ನಿರ್ಜನ ಪ್ರದೇಶದಲ್ಲೇ ಈತನ ವಾಸ. ಹಂಪಿ ಎಕ್ಸ್ಪ್ರೆಸ್, ಅಮರಾವತಿ ಎಕ್ಸ್ಪ್ರೆಸ್ ಸೇರಿ ದಂತೆ ಇನ್ನಿತರ ರೈಲುಗಳು ತೋರಣಗಲ್ಲಿಂದ ಹೊಸಪೇಟೆ ಮಾರ್ಗವಾಗಿ ಸಂಚರಿಸುತ್ತಿವೆ. ಅಂಬೆಗಾಲಿನಿಂದ ಬಂದ ಈತ ನೇರವಾಗಿ ರೈಲುಗಳಲ್ಲಿನ ಸಾಮಾನ್ಯ ಪ್ರಯಾಣಿಕರ ಬೋಗಿ ಏರಿ, ಮೊದ್ಲು ತನ್ನ ಬೆನ್ನುಭಾಗಕ್ಕೆ ಹಾಕಿಕೊಂಡ ಚೀಲದಲ್ಲಿದ್ದ ಬಟ್ಟೆಯನ್ನು ಹೊರ ತೆಗೆದುಕೊಂಡು ಕಸಗೂಡಿಸುತ್ತಾ ಮುನ್ನಡೆಯುತ್ತಾನೆ.
ಅಲ್ಲಿರುವ ಪ್ರಯಾಣಿಕರ ಬಳಿ ಕೈಚಾಚುತ್ತಾ ಹೋಗುತ್ತಾನೆ. ಪ್ರಯಾಣಿಕರು ಮನಸೋ ಇಚ್ಛೆಯಂತೆ ಕೊಡುವ ಬಿಡಿ ಗಾಸಿನ ಆಧಾರದಲ್ಲೇ ಈತನ ಹಸಿವು ನೀಗೋದು. ಅವರಿವರು ಕೊಡುವ ತಿಂಡಿ- ತಿನಿಸುಗಳೇ ಈ ಅನಾಥ ವಿಕಲಚೇತನನಿಗೆ ಮೃಷ್ಠಾನ್ನ
ಜಿಲ್ಲೆಯ ತೋರಣಗಲ್ಲು ರೈಲು ನಿಲ್ದಾಣದಲ್ಲಿ ಏರುವ ಆ ವ್ಯಕ್ತಿ ಹೊಸಪೇಟೆ ರೈಲು ನಿಲ್ದಾಣದಲ್ಲಿ ಇಳಿದುಕೊಳ್ಳುತ್ತಾನೆ. ಪುನಃ ಹೊಸಪೇಟೆ ರೈಲು ನಿಲ್ದಾಣದಿಂದ ರೈಲು ಏರುವ ಆತ ತೋರಣಗಲ್ಲು ರೈಲು ನಿಲ್ದಾಣದಲ್ಲಿ ಇಳಿದುಕೊಳ್ಳುತ್ತಾನೆ. ಇದರ ಮಧ್ಯದಲ್ಲಿ ರೈಲಿನ ಭೋಗಿಗಳಲ್ಲಿ ಕಸಗೂಡಿಸುತ್ತಾನೆ. ಪ್ರಯಾಣಿಕರು ಇತನ ಕಾಯಕ ನಿಷ್ಠೆ ನೋಡಿ 1 ರೂ,2 ರೂ ನೀಡಿದರೇ ಪಡೆಯುತ್ತಾನೆ. ಇಲ್ಲದಿದ್ದರೇ ಸುಮ್ಮನೇ ಕೈಯಲ್ಲಿರುವ ಬಟ್ಟೆಯಿಂದ ಕಸಗೂಡಿಸಿ ಕೊಂಡು ಮುಂದೆ ಸಾಗುತ್ತಾನೆ.
ಬೆಳಗ್ಗೆ 7 ಗಂಟೆಗೆ ತೋರಣಗಲ್ಲಿಗೆ ಬರುವ ಹಂಪಿ ಎಕ್ಸ್ಪ್ರೆಸ್ ರೈಲಿನಿಂದ ಈತನ ಕಾಯಕ ಆರಂಭವಾಗುತ್ತದೆ. ಸಂಜೆ ಇಲ್ಲವೇ ಮಧ್ಯಾಹ್ನದವರೆಗೆ ಈ ರೀತಿ ರೈಲಿನಲ್ಲಿ ಏರಿಕೊಂಡು ಬೋಗಿಗಳಲ್ಲಿ ಕೈಯಿಂದ ಕಸ ಬಳಿದು, ಹಣ, ಆಹಾರ ಪಡೆದು ಉಳಿದ ಭಿಕ್ಷುಕರಿಗೆ ಮಾದರಿಯಾಗಿದ್ದಾನೆ. ದುರಂತವೆಂದರೇ ಈ ವ್ಯಕ್ತಿಯ ಕಾಲುಗಳು ಸ್ವಾಧೀನ ಕಳೆದುಕೊಂಡಿವೆ. ಮಾತನಾಡಲು ಸಹ ಬರುವುದಿಲ್ಲ.
ಕುಟುಂಬಸ್ಥರು ಯಾರೂ ಇಲ್ಲ. ಇದ್ದರೂ ಅವರು ಎಲ್ಲಿದ್ದಾರೆ ಎಂಬ ಅರಿವು ಆ ವ್ಯಕ್ತಿಗಿಲ್ಲ. ಇಷ್ಟುವರ್ಷ ಕಳೆದರೂ ಅವರೂ ಕೂಡ ಈತನ ಪತ್ತೆಗಾಗಿ ಬಂದಿಲ್ಲ. ಜಿಲ್ಲೆಯಲ್ಲಿ ಈ ರೀತಿ ವಿಕಲಚೇತನ ಭಿಕ್ಷಕರು ಹಲವರಿದ್ದು, ಅವರಿಗೆ ಸಮರ್ಪಕವಾಗಿ ಸೌಲಭ್ಯ ದೊರಕಿಲ್ಲ ಎಂಬುವುದಕ್ಕೆ ಈ ವ್ಯಕ್ತಿಯೇ ಸಾಕ್ಷಿಯಾಗಿದ್ದಾನೆ.
2011ರ ಅಂಕಿ-ಅಂಶಗಳ ಪ್ರಕಾರ ಜಿಲ್ಲೆಯಲ್ಲಿ 12,945 ದೈಹಿಕ ವಿಕಲಚೇತನರಿದ್ದಾರೆ. 2733 ದೃಷ್ಟಿದೋಷ ಉಳ್ಳವರಿದ್ದಾರೆ. 2513 ಶ್ರವಣ ದೋಷ ಉಳ್ಳವರಿದ್ದಾರೆ. 1964 ಬುದ್ಧಿ ಮಾಂದ್ಯರಿದ್ದಾರೆ. 260 ಮಾನಸಿಕ ಅಸ್ವಸ್ಥರಿದ್ದಾರೆ. 567 ಬಹು ವಿಧದ ವಿಕಲಚೇತನರಿದ್ದಾರೆ. ಇವರಲ್ಲಿ ಶೇ.70ರಷ್ಟು ಜನರಿಗೆ ತಮ್ಮ ಜೀವನ ತಾವು ಕಟ್ಟಿಕೊಳ್ಳಬೇಕೆನ್ನುವ ಮಹದಾಸೆಯಿದೆ. ಆದರೆ, ಅವರಿಗೆ ಸರ್ಕಾರದ ಯೋಜನೆಗಳು ಸರಿಯಾಗಿ ಮುಟ್ಟದೇ, ಕುಟುಂಬದವರು ಸರಿಯಾದ ರಕ್ಷಣೆ ಕೊಡದೇ ಇದ್ದಾಗ ಈ ರೀತಿ ಭಿಕ್ಷಾಟನೆಗೆ ಇಳಿಯುತ್ತಾರೆ ಎನ್ನುತ್ತಾರೆ ಪ್ರಜ್ಞಾವಂತರು.