ವಿಜಯನಗರ: ಹೊಸಪೇಟೆಯ ಎಂಎಸ್‍ಪಿಎಲ್ ಲಿಮಿಟೆಡ್ ವತಿಯಿಂದ ಸ್ಥಾಪಿಸಲು ಉದ್ದೇಶಿಸಿರುವ ಮೆದು ಕಬ್ಬಿಣ ಉತ್ಪಾದನಾ ಘಟಕ (3 ಎಂ.ಟಿ.ಪಿ.ಎ ಸಾಮರ್ಥ್ಯದ ಐರನ್ ಓರ್ ಬೆನಿಫಿಕೇಶನ್ ಪ್ಲ್ಯಾಂಟ್ ಮತ್ತು ಪೆಲೆಟ್ ಪ್ಲ್ಯಾಂಟ್) ನಿರ್ಮಾಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಸಾರ್ವಜನಿಕ ಸಭೆ ನಡೆಯಿತು. ಸಂಡೂರು ತಾಲೂಕಿನ ಯಶವಂತನಗರ ಗ್ರಾ.ಪಂ. ವ್ಯಾಪ್ತಿಯ ಸೋಮಲಾಪುರದಲ್ಲಿ ಕಾರ್ಖಾನೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಸಾರ್ವಜನಿಕ ಅಹವಾಲು ಸಭೆಯನ್ನು ಕರೆಯಲಾಗಿತ್ತು. ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ್, ಕರ್ನಾಟಕ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಶೆಣೈ ಮತ್ತು ಡಿವೈಎಸ್‍ಪಿ ಕಾಶಿನಾಥ್ ಅವರು ಹಾಜರಿದ್ದರು.
ಘಟಕ ಸ್ಥಾಪನೆಗೆ ಅನುಮತಿ ನೀಡಲು ಬರುವುದಿಲ್ಲ: ಸಂಡೂರಿನ ಜನಸಂಗ್ರಾಮ ಪರಿಷತ್‍ನ ಪದಾಧಿಕಾರಿಗಳು, ಪರಿಸರ ಪ್ರೇಮಿಗಳು ಸೇರಿ 800ಕ್ಕೂ ಅಧಿಕ ಸಾರ್ವಜನಿಕರು ಭಾಗಿಯಾಗಿ ಘಟಕ ಸ್ಥಾಪನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಪ್ರಸ್ತಾಪಿತ ಘಟಕದ 200 ಮೀಟರ್ ಅಂತರದಲ್ಲಿ(ವೈಮಾನಿಕ ಅಂತರ) ಯಶವಂತನಗರ, ಸೋಮಲಾಪುರ ಗ್ರಾಮಗಳಿವೆ. ಯಾವುದೇ ಉದ್ದಿಮೆಗಳನ್ನು ಗ್ರಾಮದಿಂದ 1-2 ಕಿ.ಮೀ ವ್ಯಾಪ್ತಿಯ ಆಚೆಗೆ ಪ್ರಾರಂಭಿಸಬೇಕೆಂದು ಕಾನೂನಿದೆ. ಈ ಕಾನೂನಿಗೆ ವಿರುದ್ಧವಾಗಿರುವುದರಿಂದ ಘಟಕ ಸ್ಥಾಪನೆಗೆ ಅನುಮತಿ ನೀಡಲು ಬರುವುದಿಲ್ಲ ಎಂದು ಜನಸಂಗ್ರಾಮ ಪರಿಷತ್‍ನ ಮುಖಂಡರು ಸಭೆಯಲ್ಲಿ ಅಭಿಪ್ರಾಯ ಮಂಡಿಸಿದರು.
ಆರೋಗ್ಯದ ಮೇಲೆ ಪರಿಣಾಮ: ಮೆದು ಕಬ್ಬಿಣ ಉತ್ಪಾದನಾ ಘಟಕ ಸ್ಥಾಪಿಸಲು ಉದ್ದೇಶಿಸಿರುವ ಘಟಕದ ಜಾಗದಿಂದ 100 ಮೀಟರ್ ಅಂತರದಲ್ಲಿ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಯಾದ ಯಶವಂತನಗರ ಪಾಲಿಟೆಕ್ನಿಕ್ ಡಿಪ್ಲೋಮಾ ಕಾಲೇಜಿದ್ದು, ಘಟಕದಿಂದ ಕಾಲೇಜಿನಲ್ಲಿ ಓದುವ 800ಕ್ಕೂ ಹೆಚ್ಚು ಮಕ್ಕಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ನಿಯಮ ಉಲ್ಲಂಘನೆ: 54.3 ಎಕರೆ ಕೃಷಿ ಪರಿವರ್ತನೆಯಾಗಿರುವ ಭೂಮಿಯು ಈ ಮೊದಲು ಮೆ.ಸಲಗಾಂವ್ಕರ್ ಹೆಸರಿನಲ್ಲಿ ಭೂ ಪರಿವರ್ತನೆ ಆಗಿತ್ತು. ಇತ್ತೀಚಿನ ವರ್ಷಗಳಲ್ಲಿ ಭೂ ಪರಿವರ್ತನೆ ಹೊಂದಿದ ಜಮೀನನ್ನು ನೇರವಾಗಿ ಎಂ.ಎಸ್.ಪಿ.ಎಲ್ ಉದ್ದಿಮೆಯ ಹೆಸರಿಗೆ ವರ್ಗಾವಣೆ ಮಾಡಲಾಗಿದೆ. ನಿರ್ದಿಷ್ಟವಾದ ಉದ್ದಿಮೆ ಸ್ಥಾಪನೆಗಾಗಿ ಭೂಪರಿವರ್ತನೆ ಹೊಂದಿದ ಜಮೀನನ್ನು ಅನುಮತಿ ಪಡೆದ ಉದ್ದಿಮೆದಾರನು ಉದ್ದೇಶಿತ ಉದ್ದಿಮೆಗಾಗಿಯೇ ಬಳಕೆ ಮಾಡಿಕೊಳ್ಳಬೇಕೇ ವಿನಃ ಇನ್ನೊಂದು ಉದ್ದಿಮೆದಾರರಿಗೆ ಮಾರಾಟ ಮಾಡಲು ಬರುವುದಿಲ್ಲ. ಒಂದು ವೇಳೆ ಮಾರಾಟ ಮಾಡಲೇಬೇಕೆಂದಲ್ಲಿ ಭೂಪರಿವರ್ತನೆ ಹೊಂದಿದ ಜಮೀನನ್ನು ಪುನಃ ಕೃಷಿ ಜಮೀನಿಗೆ ವರ್ಗಾವಣೆಯಾದ ನಂತರ ಮಾರಾಟ ಮಾಡಲು ಕಾಯ್ದೆಯಲ್ಲಿ ಅವಕಾಶವಿದೆ. ಈ ಕಾಯ್ದೆಯನ್ನು ಉಲ್ಲಂಘನೆ ಮಾಡಿದ್ದು, ಪ್ರಸ್ತಾಪಿತ ಉದ್ದಿಮೆಗೆ ಅನುಮತಿ ನೀಡಲು ಅವಕಾಶ ಮಾಡಿಕೊಡಬಾರದು ಎಂದು ಪರಿಸರವಾದಿಗಳು ಸಭೆಯಲ್ಲಿ ಆಗ್ರಹಿಸಿದ್ದಾರೆ.
ಘಟಕವು ಆರಂಭದಲ್ಲಿಯೇ ಪಂಚಾಯತಿಯ ಷರತ್ತುಗಳನ್ನು ಉಲ್ಲಂಘನೆ ಮಾಡಿದ್ದು, ಈ ಘಟಕ ಒಂದು ವೇಳೆ ಸ್ಥಾಪನೆಯಾದರೆ ಸರ್ಕಾರದ ಎಲ್ಲಾ ಷರತ್ತುಗಳನ್ನು ಉಲ್ಲಂಘನೆ ಮಡುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಘಟಕ ನಿರ್ಮಾಣ ಮಾಡಲು ನೀರನ್ನು ಬೋರ್ವೆಲ್ಗಳ ಮೂಲಕ ಪಡೆಯುವುದಾಗಿ ಹೇಳಿದೆ. ಈಗಾಗಲೇ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂತರ್ಜಲ ಕುಸಿತವಾಗಿದ್ದು ಈ ಉದ್ದಿಮೆದಾರರು ದೊಡ್ಡ ಪ್ರಮಾಣದ ಬೋರ್‍ವೆಲ್ ಹಾಕುವುದರಿಂದ ಇನ್ನಷ್ಟು ನೀರಿನ ಸಮಸ್ಯೆಯುಂಟಾಗುವುದರ ಹಿನ್ನೆಲೆ ಈ ಉದ್ದಿಮೆಗೆ ಅನುಮತಿ ನೀಡಲು ವಿರೋಧವಿರುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ನಾಪತ್ತೆಯಾಗಿದ್ದ ಸುಬೇದಾರ್ ತಿಂಗಳ ಬಳಿಕ ಪತ್ತೆ.. ಖಿನ್ನತೆಯಿಂದ ಹಳೆಯದೆಲ್ಲ ಮರೆವು
ಈ ಉದ್ದಿಮೆಯ ಪ್ರದೇಶಕ್ಕೆ ಹೊಂದಿಕೊಂಡಂತೆ ಸಂರಕ್ಷಿತ ಅರಣ್ಯವಿದ್ದು ಉದ್ದಿಮೆ ಸ್ಥಾಪನೆಯಾದರೆ ವನ್ಯ ಜೀವಿಗಳಿಗೆ ಮತ್ತು ಹತ್ತಿವಿರುವ ಗ್ರಾಮಕ್ಕೆ ಘಟಕದಿಂದ ಹೊರಸೂಸುವ ಮಾಲಿನ್ಯದಿಂದಾಗಿ ಆರೋಗ್ಯದ ಮೇಲೆ ಗಂಭೀರ ಪರಿಣಾಮವುಂಟಾಗುತ್ತದೆ. ಹೀಗಾಗಿ ಶತಾಗತಾಯ ಘಟಕ ಸ್ಥಾಪನೆಗೆ ಅವಕಾಶ ನೀಡಬಾರದೆಂದು ಸಭೆಯಲ್ಲಿ ಸಾರ್ವಜನಿಕರು, ಪರಿಸರವಾದಿಗಳು, ಹೋರಾಟಗಾರರು ತೀವ್ರವಾಗಿ ಆಗ್ರಹಿಸಿದ್ದಾರೆ.