ಬಳ್ಳಾರಿ : 2020-2021ನೇ ಸಾಲಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಎಲ್ಲಾ ಆಯೋಜನೆಗಳು ಸರ್ಕಾರದ ನೀತಿ ನಿಯಮದ ಅನುಸಾರ ಜಾರಿಯಾಗಿವೆ. ಕಲಾವಿದರು ಅದರ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ. ರಂಗಣ್ಣವರ ತಿಳಿಸಿದರು.
ನಗರದ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯ ಆವರಣದಲ್ಲಿ ಈಟಿವಿ ಭಾರತದೊಂದಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶದಕ ಸಿದ್ದಲಿಂಗೇಶ ಕೆ. ರಂಗಣ್ಣವರ ಮಾತನಾಡಿ, 2020-2021ನೇ ಸಾಲಿನ ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಎಲ್ಲಾ ಆಯೋಜನೆಗಳು ಸರ್ಕಾರದ ನೀತಿ ನಿಯಮದ ಅನುಸಾರ ಜಾರಿಯಾಗಿವೆ. ಕೊರೊನಾ ಲಾಕ್ಡೌನ್ ನಂತರ ಗಣಿನಾಡು ಕಲಾವಿದರಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಕಲಾವಿದರು ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಲಾಕ್ಡೌನ್ ನಲ್ಲಿ ಯಾವುದೇ ಕಾರ್ಯಕ್ರಮ ನೀಡಿಲ್ಲ. ಆದರೆ, ಸರ್ಕಾರ ಕೋವಿಡ್ ಸಮಯದಲ್ಲಿ ಕಲಾವಿದರಿಗೆ 2,000 ರೂಪಾಯಿ ಸಹಾಯಧನವನ್ನು ನೀಡಿದೆ. ಕೇಂದ್ರ ಕಚೇರಿ ಬೆಂಗಳೂರಿನಿಂದ ಬಳ್ಳಾರಿ ಜಿಲ್ಲೆಯ 577 ಕಲಾವಿದರ ಖಾತೆಗೆ ನೇರವಾಗಿ ಹಣ ಜಮಾ ಮಾಡಲಾಗಿದೆ ಎಂದರು.
ಕಾರ್ಯಕ್ರಮಗಳು ಹೀಗಿವೆ : ಚಿಗುರು, ಯುವ ಸೌರಭ, ಸಾಂಸ್ಕೃತಿಕ ಸೌರಭ, ಸುಗ್ಗಿ-ಹುಗ್ಗಿ, ಮಹಿಳಾ ಸಾಂಸ್ಕೃತಿಕ ಉತ್ಸವ, ಪರಿಶಿಷ್ಟ ಜಾತಿ ಜನಾಂಗದ ಕಲಾವಿದರಿಗೆ ಜನಪರ ಉತ್ಸವ, ಪರಿಶಿಷ್ಟ ಪಂಗಡದ ಜನಾಂಗದ ಕಲಾವಿದರಿಗೆ ಗಿರಿಜನ ಉತ್ಸವ, ಗುರುಶಿಷ್ಯ ಪರಂಪರೆ ಈ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗಿದೆ. ಹಾಗೇ ಸರ್ಕಾರದ ಕಡೆಯಿಂದ ಹಣ ಸಹ ಬಿಡುಗಡೆಯಾಗಿದೆ ಎಂದರು. ಆಯ್ದ ಕಲಾವಿದರನ್ನು ಸಭೆ ಕರೆದು ಆಯ್ಕೆ ಪ್ರಕ್ರಿಯೆ ನಂತರ ಕಾರ್ಯಕ್ರಮಗಳನ್ನು ನೀಡುವುದಾಗಿ ತಿಳಿಸಿದರು.
ಕಲಾವಿದರಲ್ಲದವರಿಗೆ ಸಹಾಯಧನ ನೀಡಿರುವ ಆರೋಪ : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾವಿದರಲ್ಲದವರಿಗೆ ಸಹಾಯಧನ ನೀಡಿಲ್ಲ. ದಾಖಲಾತಿಗಳನ್ನು ಪರೀಶಿಲನೆ ಮಾಡಿ ಕೇಂದ್ರ ಕಚೇರಿಗೆ ಕಳಿಸಿದ್ದೇವೆ ಎಂದು ಸಹಾಯಕ ನಿರ್ದೇಶಕರು ತಿಳಿಸಿದರು.
ಇಲಾಖೆಯ ಜೊತೆ ಜೊತೆಗೆ ಬರುವ ಲಲಿತ ಕಲಾ, ಜಾನಪದ, ಲಲಿತಕಲಾ, ಸಂಗೀತ ಮತ್ತು ನೃತ್ಯ, ಸಾಹಿತ್ಯ ಅಕಾಡೆಮಿ ಅವರು ಸಹ ಲಿಸ್ಟ್ ಮಾಡಿಕೊಟ್ಟಿದ್ದಿದೆ. ಶೇ.99ರಷ್ಟು ಕಲಾವಿದರಲ್ಲದವರಿಗೆ ಸಹಾಯಧನ ಹೋಗಿದೆ ಎನ್ನುವುದು ಸುಳ್ಳು ಎಂದು ಸ್ಪಷ್ಟನೆ ನೀಡಿದರು.
ಕಲಾವಿದರಲ್ಲದವರಿಗೆ ಸಹಾಯಧನ ಬಂದಿದೆ ಎಂದು ತಿಳಿದು ಬಂದ್ರೇ ಅವರ ವಿರುದ್ಧ ಕೇಂದ್ರ ಕಚೇರಿ ನಿರ್ದೇಶಕರಿಗೆ ಪತ್ರ ಬರೆದು ಕ್ರಮ ತೆಗದುಕೊಳ್ಳಲು ಮನವಿ ಮಾಡುವೆ. ಒಟ್ಟು 877 ಅರ್ಜಿಗಳಲ್ಲಿ 577 ಕಲಾವಿದರಿಗೆ ಸರ್ಕಾರದ ಕಡೆಯಿಂದ ಸಹಾಯಧನ ನೇರವಾಗಿ ಖಾತೆಗೆ ಜಮೆ ಆಗಿದೆ. ಇನ್ನೂ 277 ಕಲಾವಿದರಿಗೆ ಸಹಾಯಧನ ಬಂದಿಲ್ಲ ಎಂದು ತಿಳಿಸಿದರು.