ಬಳ್ಳಾರಿ: ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಕೃಷಿ ಸಾಲ ಪಡೆದ ರೈತರಿಗೆ ಒನ್ ಟೈಮ್ ಸೆಟಲ್ಮೆಂಟ್ ಯೋಜನೆಯನ್ನು ಜಾರಿಗೊಳಿಸಲಾಗಿದೆ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕ್ನ ಅಧ್ಯಕ್ಷ ಶ್ರೀನಾಥ ಜೋಷಿ ತಿಳಿಸಿದ್ದಾರೆ. ಜಿಲ್ಲೆಯ ಗಾಂಧಿನಗರ ಪ್ರದೇಶದಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿಯಲ್ಲಿ ಇಂದು ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
ಕೋವಿಡ್ ವೇಳೆಯಲ್ಲಿ ಈ ವಿಶೇಷ ಯೋಜನೆಯನ್ನು ಜಾರಿಗೆ ತರಲಾಗಿದೆ. ಗಣಿನಾಡು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಎಲ್ಲ ರೈತರು ಈ ಯೋಜನೆ ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಮನವಿ ಮಾಡಿದರು.
ಒಟ್ಟು ಸಾಲದ ಮೊತ್ತದಲ್ಲಿ ಶೇ.25 ರಷ್ಟು ಕಡಿತಗೊಳಿಸಿ ಉಳಿದ ಮೊತ್ತದ ಸಾಲ ಮರುಪಾವತಿಗೆ ಅವಕಾಶ ನೀಡಲಾಗುತ್ತದೆ. ಈ ವರ್ಷ ಒಟ್ಟಾರೆಯಾಗಿ 723 ಕೋಟಿ ರೂ.ಗಳಷ್ಟು ಲಾಭ ಬಂದಿದ್ದು, ಅದರಲ್ಲಿ 14 ಕೋಟಿ ರೂ. ನಿವ್ವಳ ಲಾಭ ಬಂದಿದೆ. ಕಳೆದ ಬಾರಿಗೆ ಹೋಲಿಕೆ ಮಾಡಿದರೆ ಇಂದು ತೀರಾ ಕಡಿಮೆ ನಿವ್ವಳ ಲಾಭ ಗಳಿಸಿದೆ. 3,478 ಕೋಟಿ ರೂ.ಗಳ ಆದಾಯ ಗಳಿಸಿದ್ದು, ಶೇ.7.58 ಬೆಳವಣಿಗೆ ದಾಖಲಿಸಿದೆ. ಬ್ಯಾಂಕ್ನ ಒಟ್ಟು ವ್ಯವಹಾರ ಅಂದಾಜು 55,855 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಶ್ರೀನಾಥ ಜೋಶಿ ವಿವರಿಸಿದರು.
ಬ್ಯಾಂಕಿನ ಠೇವಣಿ ಕಳೆದ ವರ್ಷದ ಸಾಧನೆಯಾದ ರೂ.28,435 ಕೋಟಿ ರೂ.ಗಳಿಂದ ಈ ವರ್ಷ ರೂ.31,068 ರೂ. ಕೋಟಿಗಳಿಗೆ ಏರಿಕೆಯಾಗಿದ್ದು ಶೇ. 9.26 ರಷ್ಟು ಉತ್ತಮ ಬೆಳವಣಿಗೆ ಸಾಧಿಸಿದೆ. ಬ್ಯಾಂಕಿಂಗ್ ಉದ್ಯಮ ಕೋವಿಡ್ - 19 ಒತ್ತಡಕ್ಕೆ ನಲುಗಿದ್ದ ಸಮಯದಲ್ಲೂ, ಸಾಲ ಮತ್ತು ಮುಂಗಡಗಳು ರೂ.24,787 ಕೋಟಿ ರೂ.ಗಳಿಗೆ ಏರಿಕೆಯಾಗಿದೆ. 3,002 ಕೋಟಿ ರೂ.ಗಳ ನಿವ್ವಳ ವೃದ್ಧಿ ಹಾಗೂ ಶೇ.13.78ರ ಬೆಳವಣಿಗೆ ಸಾಧಿಸುವ ಮೂಲಕ ಬ್ಯಾಂಕ್ ರೈತಾಪಿ ವರ್ಗದವರಿಗೆ ತನ್ನ ಬದ್ಧತೆ ಉಳಿಸಿಕೊಂಡು ಸಕಾಲದಲ್ಲಿ ಹಣಕಾಸಿನ ನೆರವನ್ನ ನೀಡಿದೆ ಎಂದು ಜೋಷಿ ತಿಳಿಸಿದರು.
ಇದನ್ನೂ ಓದಿ: Unlock 3.O: ನಾಳೆ ಚಿತ್ರಮಂದಿರ, ಮಾಲ್, ಸ್ವಿಮ್ಮಿಂಗ್ ಪೂಲ್ ಆರಂಭಕ್ಕೆ ಸಿಗುತ್ತಾ ಗ್ರೀನ್ ಸಿಗ್ನಲ್?