ಬಳ್ಳಾರಿ: ಹಗರಿಬೊಮ್ಮನಹಳ್ಳಿ ತಾಲೂಕಿನ ನೆಹರು ನಗರ ಮತ್ತು ಮಗಿಯಮ್ಮನಹಳ್ಳಿಯಲ್ಲಿ ನಡೆಯುತ್ತಿದ್ದ ಎರಡು ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆದಿದ್ದಾರೆ.
ನೆಹರು ನಗರದಲ್ಲಿ 15 ವರ್ಷದ ಬಾಲಕಿ ಮತ್ತು ಮಗಿಯಮ್ಮನಹಳ್ಳಿಯಲ್ಲಿ 16 ವರ್ಷದ ಬಾಲಕಿಗೆ ಎರಡು ಪ್ರತ್ಯೇಕ ಸ್ಥಳಗಳಲ್ಲಿ ವಿವಾಹ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಈ ವೇಳೆ ಅಧಿಕಾರಿಗಳು ದಾಳಿ ನಡೆಸಿ ವಿವಾಹಕ್ಕೆ ತಡೆಯೊಡ್ಡಿದ್ದಾರೆ.
ನೆಹರು ನಗರ ಮತ್ತು ಮಗಿಯಮ್ಮನಹಳ್ಳಿಗೆ ಪಿ.ಡಿ.ಒ ಖಜಾಬಾನಿ, ಪೊಲೀಸ್ ಗುರುಬಸವರಾಜ್, ಗ್ರಾಮ ಲೆಕ್ಕಾಧಿಕಾರಿ ಮತ್ತು ಅಂಗನವಾಡಿ ಸೂಪರ್ ವೈಜರ್, ಚೈಲ್ಡ್ ಲೈನ್ ಸಂಯೋಜನಾಧಿಕಾರಿ ನಾಗರಾಜ್ ಬಾಲಕಿಯರ ಮನೆಗೆ ತೆರಳಿ ಪೋಷಕರಿಗೆ ಬಾಲ್ಯ ವಿವಾಹ ನಿಷೇಧ ಕಾನೂನಿನ ಬಗ್ಗೆ ತಿಳುವಳಿಕೆ ನೀಡಿದ್ದಾರೆ. ನಂತರ ಪೋಷಕರಿಂದ ಮುಚ್ಚಳಿಕೆ ಪತ್ರವನ್ನೂ ಬರೆಯಿಸಿಕೊಂಡಿದ್ದಾರೆ.
ಈ ಕುರಿತು ಚೈಲ್ಡ್‌ಲೈನ್ ಸಂಯೋಜಕರಾದ ನಾಗರಾಜ್ ದೂರವಾಣಿ ಮೂಲಕ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದ್ದು, ತಾಲೂಕಿನ ನೆಹರು ನಗರ ಮತ್ತು ಮಗಿಯಮ್ಮನಹಳ್ಳಿ ಗ್ರಾಮಗಳಿಂದ ಬಾಲ್ಯ ವಿವಾಹ ಸಿದ್ಧತೆ ಕುರಿತು ಮಕ್ಕಳ ಸಹಾಯವಾಣಿ 1098
ಗೆ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಹೇಳಿದ್ದಾರೆ.