ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ನಡೆಯಬೇಕಿದ್ದ ಎರಡು ಬಾಲ್ಯ ವಿವಾಹಗಳನ್ನು ಅಧಿಕಾರಿಗಳು ತಡೆದಿದ್ದಾರೆ.
ಬಾಲ್ಯ ವಿವಾಹ ಕುರಿತು ಮಕ್ಕಳ ಸಹಾಯವಾಣಿಗೆ ಬಂದ ದೂರು ಆಧರಿಸಿ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ನಡೆಯಬೇಕಿದ್ದ ಎರಡು ಬಾಲ್ಯ ವಿವಾಹಗಳನ್ನು ತಡೆಯುವಲ್ಲಿ ಅಧಿಕಾರಿಗಳ ತಂಡ ಯಶಸ್ವಿಯಾಗಿದೆ. ಗ್ರಾಮದಲ್ಲಿ 16 ಮತ್ತು 17 ವರ್ಷದ ಬಾಲಕಿಯರ ಮದುವೆ ಜು. 28 ಮತ್ತು 30ರಂದು ನಡೆಸಲು ಕುಟುಂಬದವರು ಸಿದ್ಧತೆ ಮಾಡಿಕೊಂಡಿದ್ದರು.
ಮಕ್ಕಳ ಸಹಾಯವಾಣಿ ಸಂಯೋಜಕರಾದ ಚಿದಾನಂದ ಮತ್ತು ನೇತ್ರಾ, ಗ್ರಾಮ ಲೆಕ್ಕಾಧಿಕಾರಿ ಮಂಜುನಾಥ, ಮಹಿಳಾ ಮೇಲ್ವಿಚಾರಕಿ ಸುಮಂಗಳಾ, ಕುರುಗೋಡು ಪೊಲೀಸ್ ಪೇದೆ ಕರಿಬಸಪ್ಪ ಮತ್ತು ಶರಣಪ್ಪ, ಬಳ್ಳಾರಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಉಮೇಶ್ ಪೋಷಕರಿಗೆ ಬಾಲ್ಯ ವಿವಾಹ ಕಾಯ್ದೆ ಕುರಿತು ಮಾಹಿತಿ ನೀಡಿದರು. ನಂತರ ಪೋಷಕರಿಂದ ಮುಚ್ಚಳಿಕೆ ಬರೆಯಿಸಿಕೊಂಡರು.
ಅಲ್ಲದೆ ಜು. 29ರಂದು ಬಳ್ಳಾರಿಯ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಇಬ್ಬರು ಬಾಲಕಿಯರನ್ನು ಹಾಜರುಪಡಿಸುವಂತೆ ಪೋಷಕರಿಗೆ ಸೂಚಿಸಿದರು.