ಬಳ್ಳಾರಿ: ಹಥ್ರಾಸ್‌ನಲ್ಲಿ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು ಕಾಂಗ್ರೆಸ್ ಪಕ್ಷ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ ಎಂದು ಭಾರತೀಯ ಜನಶಕ್ತಿ ಕಾಂಗ್ರೆಸ್ ಪಕ್ಷದ ಸಂಸ್ಥಾಪಕಿ ಅನುಪಮಾ ಶೆಣೈ ಹೇಳಿದ್ದಾರೆ.
ಬಳ್ಳಾರಿ ನಗರದ ಪತ್ರಿಕಾ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಥ್ರಾಸ್‌ನಲ್ಲಿ ನಡೆದ ಘಟನೆಯ ವಾಸ್ತವಾಂಶವನ್ನು ಕಾಂಗ್ರೆಸ್ ಪಕ್ಷ ಬಿಚ್ಚಿಡುತ್ತಿಲ್ಲ. ಎಐಸಿಸಿ ನಾಯಕ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರ ವಿರುದ್ಧ ಉತ್ತರಪ್ರದೇಶ ರಾಜ್ಯದ ಪೊಲೀಸರು ದುಂಡಾವರ್ತನೆ ತೋರಿದ್ದಾರೆ ಎಂಬ ಊಹಾಪೋಹದ ಸುದ್ದಿಗಳನ್ನು ಹಬ್ಬಿಸುತ್ತಿರೋದು ತರವಲ್ಲ ಎಂದರು.
ಈ ಪ್ರಕರಣವನ್ನು ಮುಂದಿನ ಚುನಾವಣಾ ದಿಕ್ಸೂಚಿಯನ್ನಾಗಿ ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ. ಇಡೀ ಕಾಂಗ್ರೆಸ್ ಪಕ್ಷವೇ ಮುಳುಗುವ ಹಡಗಿನಂತಾಗಿದೆ. ಹೀಗಾಗಿ, ಹಥ್ರಾಸ್ನ ಯುವತಿಯ ಮೇಲಿನ ಅತ್ಯಾಚಾರ ಪ್ರಕರಣವನ್ನು ದೇಶವ್ಯಾಪಿ ಹಬ್ಬಿಸಿ ಹೋರಾಟ, ಪ್ರತಿಭಟನೆಯಂತಹ ಚಟುವಟಿಕೆಗಳಲ್ಲಿ ತೊಡಗಿಕೊಂಡಿರೋದು ನಿಜಕ್ಕೂ ಹಾಸ್ಯಾಸ್ಪದ ಸಂಗತಿ ಎಂದರು.
ಅತ್ಯಾಚಾರಿಗಳಿಗೆ ಪುರುಷತ್ವಹರಣ ಮಾಡಿಬಿಡಬೇಕು. ಅದೇ ಅವರಿಗೆ ನೀಡೋ ದೊಡ್ಡ ಶಿಕ್ಷೆ. ಈ ನಿಟ್ಟಿನಲ್ಲಿ ಆಳ್ವಿಕೆಯಲ್ಲಿರುವ ಸರ್ಕಾರಗಳು ಕಟ್ಟುನಿಟ್ಟಾಗಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಅತ್ಯಾಚಾರ ಪ್ರಕರಣವನ್ನ ಕೇಂದ್ರ ಸರ್ಕಾರ ಮುಚ್ಚಿಹಾಕುವ ಹುನ್ನಾರ ನಡೆಸಿದೆ. ಕಾಂಗ್ರೆಸ್ ಪಕ್ಷ ಅದನ್ನ ರಾಜಕೀಯ ಅಸ್ತ್ರವನ್ನಾಗಿ ಬಳಸಿಕೊಳ್ಳುತ್ತಿದೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗುವ ಕಾರ್ಯವನ್ನು ಕೇಂದ್ರ ಹಾಗೂ ಉತ್ತರಪ್ರದೇಶದ ಸರ್ಕಾರ ಮಾಡಲಿಲ್ಲ ಎಂದು ಅವರು ಇದೇ ವೇಳೆ ದೂರಿದ್ದಾರೆ.