ಹೊಸಪೇಟೆ (ವಿಜಯನಗರ) : ವಿಜಯನಗರ ಜಿಲ್ಲೆಯ ಅಧಿಕೃತ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. 'ವಿಜಯನಗರ ಉತ್ಸವ' ಮತ್ತು 'ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭ' ಇದೇ ಅ.2 ಮತ್ತು 3ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಅತ್ಯಂತ ವಿಜೃಂಭಣೆ ಹಾಗೂ ಅರ್ಥಪೂರ್ಣ ರೀತಿಯಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ.
ಇದೇ ಸಂದರ್ಭದಲ್ಲಿ 464 ಕೋಟಿ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಚಾಲನೆ ಮತ್ತು ಶಂಕು ಸ್ಥಾಪನೆ ನೇರವೇರುವುದರ ಮೂಲಕ ಜಿಲ್ಲೆಯ ಅಭಿವೃದ್ಧಿ ಪರ್ವಕ್ಕೆ ಮುನ್ನುಡಿ ಬರೆಯಲಾಗುತ್ತಿದೆ. ಇದಕ್ಕಾಗಿ ಬೃಹತ್ ವೇದಿಕೆ ನಿರ್ಮಾಣ ಸೇರಿ ಎಲ್ಲ ರೀತಿಯ ಸಿದ್ಧತೆಗಳು ಭರದಿಂದ ಸಾಗಿವೆ. ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಪ್ರವಾಸೋದ್ಯಮ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರು ಹಾಗೂ ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದಸಿಂಗ್ ಮತ್ತು ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿಗಳಾದ ಅನಿರುದ್ಧ ಶ್ರವಣ್ ಅವರು ಈವರೆಗಿನ ಸಿದ್ಧತೆಗಳು, ಕಾರ್ಯಕ್ರಮದ ರೂಪುರೇಷೆ, ಆಗಮಿಸುವ ಕಲಾವಿದರು ಸೇರಿ ಇನ್ನಿತರ ಮಾಹಿತಿಗಳನ್ನು ನೀಡಿದರು.
ಸಚಿವ ಆನಂದಸಿಂಗ್ ಅವರು ಮಾತನಾಡಿ, ವಿಜಯನಗರ ಜಿಲ್ಲೆಯ ಉದ್ಘಾಟನಾ ಕಾರ್ಯಕ್ರಮವನ್ನು ಸ್ಮರಣೀಯವನ್ನಾಗಿಸಿಕೊಳ್ಳುವ ನಿಟ್ಟಿನಲ್ಲಿ ಅತ್ಯಂತ ವೈಭೋವಪೇರಿತವಾಗಿ ಮತ್ತು ಅಷ್ಟೇ ಅರ್ಥಪೂರ್ಣವಾಗಿ ಈ ಕಾರ್ಯಕ್ರಮ ಸಂಘಟಿಸಲಾಗುತ್ತಿದೆ.
ಈ ಕಾರ್ಯಕ್ರಮದ ಮೂಲಕ ವಿಜಯನಗರ ಜಿಲ್ಲೆಯ ಉದ್ಘಾಟನೆಯ ಜೊತೆಗೆ ವಿಶ್ವಪಾರಂಪರಿಕ ತಾಣವಾಗಿರುವ ಹಂಪಿಯನ್ನು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಚಾರ ಸಿಗುವುದಕ್ಕೋಸ್ಕರ ಪ್ರವಾಸೋದ್ಯಮ ಇಲಾಖೆ ವತಿಯಿಂದ ರಾಜ್ಯದ ಇತರೆಡೆ ಇರುವ ಪ್ರವಾಸಿ ಸ್ಥಳಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಪ್ರಚುರಪಡಿಸುವ ಉದ್ದೇಶ ಹೊಂದಲಾಗಿದೆ.
ಕೊರೊನಾದಿಂದಾಗಿ ಸಂಕಷ್ಟಕ್ಕೊಳಗಾಗಿದ್ದ ಕಲಾವಿದರು ಮತ್ತು ತಂತ್ರಜ್ಞರಿಗೆ ಹಾಗೂ ಪ್ರವಾಸೋದ್ಯಮವನ್ನೇ ನೆಚ್ಚಿ ಬದುಕು ಸಾಗಿಸುತ್ತಿರುವವರಿಗೆ ಈ ಕಾರ್ಯಕ್ರಮದ ಮೂಲಕ ತಮ್ಮ ಕಾರ್ಯಚಟುವಟಿಕೆಗಳನ್ನು ಆರಂಭಿಸುವುದಕ್ಕೆ ಉತ್ತೇಜನ ಮಾಡಿಕೊಡಲಾಗುತ್ತಿದೆ ಎಂದು ಸಚಿವರು ವಿವರಿಸಿದರು.
80 ಕಲಾತಂಡ, ವೈವಿಧ್ಯ ಕಲೆಗಳ ಅನಾವರಣ : ಅ.2ರಂದು ಸಂಜೆ 4ಕ್ಕೆ ವಡಕರಾಯ ದೇವಸ್ಥಾನದಿಂದ ರಥಬೀದಿಯಲ್ಲಿ ವಿಜಯನಗರ ವೈಭವ ಮೆರವಣಿಗೆ ಜಿಲ್ಲಾ ಕ್ರೀಡಾಂಗಣದವರೆಗೆ ನಡೆಯಲಿದೆ. ಈ ಕಲಾತಂಡಗಳ ಜೊತೆಗೆ ಆಳ್ವಾಸ್ ಸಂಸ್ಥೆಯ 25 ಕಲಾವಿದರು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಮೆರವಣಿಗೆಯಲ್ಲಿ ಪ್ರದರ್ಶಿಸಲಿದ್ದಾರೆ.
ಪ್ರಧಾನ ವೇದಿಕೆಗೆ ವಿದ್ಯಾರಣ್ಯರ ಹೆಸರಿಡಲಾಗಿದೆ. 180x70 ಅಡಿ ಬ್ಯಾಕ್‍ಡ್ರಾಪ್ ಇದೆ. ಮಳೆ, ಗಾಳಿ ಮತ್ತು ಬೆಂಕಿ ತಗುಲಿದರೂ ಏನು ಆಗದ ಜರ್ಮನ್ ತಂತ್ರಜ್ಞಾನ ಹೊಂದಿರುವ ಮೇಲು ಹೊದಿಕೆ ಹಾಕಲಾಗುತ್ತಿದೆ. ವೇದಿಕೆ ಹಿಂಭಾಗ ವಿರೂಪಾಕ್ಷ ಗೋಪುರ, ಕಲ್ಲಿನರಥ ಮತ್ತು ಉಗ್ರನರಸಿಂಹ ವಿನ್ಯಾಸ ಸಿದ್ಧಪಡಿಸಲಾಗುತ್ತಿದೆ.
ಖ್ಯಾತ ಡ್ರಮ್ಮರ್ ಶಿವಮಣಿ, ರಾಜೇಶ್ ವೈದ್ಯ ಮತ್ತು ಪ್ರವೀಣಗೋಡ್ಖಿಂಡಿ ಅವರು ರಾತ್ರಿ 10ಕ್ಕೆ ವಾದ್ಯ ಸಂಗೀತದ ರಸದೌತಣವನ್ನು ಸಂಗೀತ ಪ್ರೇಮಿಗಳಿಗೆ ಉಣ ಬಡಿಸಲಿದ್ದಾರೆ. ಸೋಜುಗದ ಸೂಜಿಮಲ್ಲಿಗೆ ಖ್ಯಾತಿಯ ಅನನ್ಯಭಟ್ ಅವರು ಲಘುಶಾಸ್ತ್ರೀಯ ಮತ್ತು ಭಕ್ತಿ ಸಂಗೀತವನ್ನು ಪ್ರಸ್ತುತ ಪಡಿಸಲಿದ್ದಾರೆ. ಕಲಾವಿದರಾದ ಕಲಾವತಿ ದಯಾನಂದ ಅವರಿಂದ ಲಘುಶಾಸ್ತ್ರೀಯ ಮತ್ತು ಚಲನ ಚಿತ್ರಗೀತೆಗಳು, ಶಹನಾಜ್ ಅಖ್ತರ್ ಅವರು ದೇಶಭಕ್ತಿ ಆಶು ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.
ನಿರುಪಮ ಮತ್ತು ರಾಜೇಂದ್ರ ಅವರ ಅಭಿನವ ಡ್ಯಾನ್ಸ್ ಕಂಪನಿ ವತಿಯಿಂದ ವಿಜಯನಗರ ವೈಭವ-ನೃತ್ಯರೂಪಕ ಪ್ರಸ್ತುತ ಪಡಿಸಲಾಗುತ್ತದೆ. ಎಂ ಡಿ ಪಲ್ಲವಿ ಅವರು ದೇಶಭಕ್ತಿ ಗೀತೆಗಳು ಮತ್ತು ಭಾವಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಸವಿತಾ ಅವರು ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.
ಮಂಗ್ಲಿ ಗಾಯನ : ಅ.3ರಂದು ಕನ್ನೇ ಅದಿರಿಂದಿ (ಕಣ್ಣು ಹೊಡಿಯಾಕ) ಹಾಡಿನ ಖ್ಯಾತಿಯ ಗಾಯಕಿ ಮಂಗ್ಲಿ ಅವರು ಜಾನಪದ ಮತ್ತು ಚಲನಚಿತ್ರ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ಖ್ಯಾತ ಗಾಯಕರಾದ ಅನುರಾಧಾ ಭಟ್, ಶಮಿತಾ ಮಲ್ನಾಡ್ ಅವರು ಚಲನಚಿತ್ರ ಗೀತೆಗಳನ್ನು ತಮ್ಮ ಕಂಠದಿಂದ ಪ್ರಸ್ತುತ ಪಡಿಸುವ ಮೂಲಕ ಮೋಡಿ ಮಾಡಲಿದ್ದಾರೆ. ಖ್ಯಾತ ಗಾಯಕರಾದ ವಿಜಯಪ್ರಕಾಶ್ ಮತ್ತು ಅವರ ತಂಡವು ಚಲನಚಿತ್ರ ಗೀತೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.
ಲಕ್ಷ್ಮಿದುಬೆ ಮತ್ತು ತಂಡದವರು ದೇಶಭಕ್ತಿ ಮತ್ತು ಆಶು ಗೀತೆಗನ್ನಾಡಲಿದ್ದಾರೆ. ಮಂಜುಳಾ ಪರಮೇಶ ಮತ್ತು ತಂಡದವರು ನೃತ್ಯರೂಪಕ ಪ್ರಸ್ತುತ ಪಡಿಸಲಿದ್ದಾರೆ. ಸಂಜೆ 4:30ರಿಂದಲೇ ಸಾಂಸ್ಕೃತಿಕ ಕಾರ್ಯಕ್ರಮಗಳು ಆರಂಭವಾಗಲಿವೆ, ಸ್ಥಳೀಯ ಕಲಾವಿದರು ತಮ್ಮ ಕಲಾ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.
ಸ್ಥಳೀಯ ಗಾಯಕಿ ಸರಿಗಮಪ ಸೂಪರ್ ಸಿಂಗರ್ ರನ್ನರ್ ಅಪ್ ಮೀರಾ ಹಾಗೂ ಇನ್ನೋರ್ವ ಗಾಯಕಿ ಭೂಮಿಕಾ ಅವರು ಭಾಗವಹಿಸಲಿದ್ದಾರೆ ಎಂದು ಸಚಿವ ಸಿಂಗ್ ಅವರು ವಿವರಿಸಿದರು. ಈ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ವಿಶೇಷಾಧಿಕಾರಿಗಳಾದ ಅನಿರುದ್ಧ ಶ್ರವಣ್, ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ಡಿವೈಎಸ್ಪಿ ವಿಶ್ವನಾಥ ಕುಲಕರ್ಣಿ, ತಹಶೀಲ್ದಾರ್ ವಿಶ್ವನಾಥ ಮತ್ತಿತರರು ಇದ್ದರು.