ಹೊಸಪೇಟೆ : ಕೇಂದ್ರದ ನೂತನ ಕೃಷಿ ಕಾನೂನುಗಳ ವಿರುದ್ಧ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ನಂಜುಂಡಸ್ವಾಮಿ ಬಣ) ರಾಜ್ಯ ಕಾರ್ಯಾಧ್ಯಕ್ಷ ಜೆ ಎಂ ವೀರಸಂಗಯ್ಯ ಅಸಮಾಧಾನ ಹೊರ ಹಾಕಿದ್ದಾರೆ.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಕೃಷಿ ಮಸೂದೆಗಳ ವಿರುದ್ಧ ದೆಹಲಿ ರೈತ ಹೋರಾಟ 113ನೇ ದಿನಕ್ಕೆ ಕಾಲಿಟ್ಟಿದೆ. ರೈತ ಚಳವಳಿ ಹಾಗೂ ಹೋರಾಟ ಎಂದು ಕೆಲವರು ತಿಳಿದುಕೊಂಡಿದ್ದಾರೆ.
ದೇಶದ 130 ಕೋಟಿ ಜನಸಂಖ್ಯೆಯಲ್ಲಿ 70 ಕೋಟಿ ಜನರು ಕೃಷಿ ಅವಲಂಬಿತರಾಗಿದ್ದಾರೆ. ಇವರನ್ನು ನಾಶ ಹಾಗೂ ನಿರ್ಗತಿಕರನ್ನು ಮಾಡುವ ಕಾನೂನು ಜಾರಿಗೆ ತರಲಾಗಿದೆ ಎಂದ್ರು.
ರೈತರು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಸಿಗುತ್ತಿಲ್ಲ. ಗುಜರಾತ್ನಲ್ಲಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕನಿಷ್ಠ ಬೆಂಬಲ ಕುರಿತು ಮಾತನಾಡಿದ್ದರು. ಆದರೆ, ಈಗ ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಮುಂದೆ ರೈತರ ಪಂಪಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡುವುದನ್ನು ಕಡಿತಗೊಳಿಸಲಾಗುತ್ತಿದೆ. ಸ್ಮಾರ್ಟ್ ಮೀಟರ್ ಜಾರಿಗೆ ಮುಂದಾಗಿದ್ದಾರೆ. ಅದಕ್ಕೆ ರೀಚಾರ್ಜ್ ಮಾಡಿ ವಿದ್ಯುತ್ ಬಳಕೆ ಮಾಡಬೇಕಾಗುತ್ತದೆ. ಆ ಕರೆನ್ಸಿ ಎಷ್ಟು ದಿನದೊಳಗೆ ಮುಗಿಯುತ್ತದೆ ಎಂಬುದು ಹೇಳುವುದಕ್ಕೆ ಬರುವುದಿಲ್ಲ ಎಂದರು.
ರೈತರ ಬೆಳೆಗಳಿಗೆ ಬೆಂಬಲ ಬೆಲೆ ನೀಡಬೇಕು. ಅಲ್ಲದೇ, ದೇಶದಲ್ಲಿ 45,000 ಎಪಿಎಂಸಿಗಳನ್ನು ಸ್ಥಾಪನೆ ಮಾಡಬೇಕು. ಆದರೆ, ಭಾರತದಲ್ಲಿ ಕೇವಲ 5 ಸಾವಿರ ಎಪಿಎಂಸಿಗಳಿವೆ ಎಂದರು.
1970ರ ದಶಕದಲ್ಲಿ ಭಾರತ ದೇಶ ಬೇಡುವ ರಾಷ್ಟ್ರವಾಗಿತ್ತು. 2020ರಲ್ಲಿ ನೀಡುವ ದೇಶವಾಗಿ ಮಾರ್ಪಾಡಾಯಿತು. 280 ದಶಲಕ್ಷ ಟನ್ ಆಹಾರ ಉತ್ಪಾದನೆಯನ್ನು ಮಾಡಲಾಗುತ್ತಿದೆ. ಅಧಿಕ ಉತ್ಪಾದನೆ ಮಾಡುವ ಮೂಲಕ ಹೆಚ್ಚು ಸಾಲಗಾರರಾಗಿದ್ದೇವೆ ಎಂದು ಹೇಳಿದರು.