ಬಳ್ಳಾರಿ: ಗಣಿನಾಡಿನಲ್ಲಿನ ಹೂವಿನ ಹಡಗಲಿ, ಸಿರುಗುಪ್ಪ, ಕಂಪ್ಲಿ, ಹಗರಿಬೊಮ್ಮನಹಳ್ಳಿಯ ಪ್ರದೇಶಗಳಲ್ಲಿ ನೆರೆಹಾವಳಿಯಿಂದ ಅನೇಕ ಮನೆಗಳು ಸೇರಿದಂತೆ ಬೆಳೆಹಾನಿಯಾಗಿದ್ದು, ಇದಕ್ಕೆ ಸಂಭಂದಿಸಿದ ಅಧಿಕಾರಿಗಳ ತಂಡ ಸಮೀಕ್ಷೆ ನಡೆಸುತ್ತಿವೆ. ಸಮೀಕ್ಷೆ ಕಾರ್ಯ ಅಂತಿಮ ಹಂತದಲ್ಲಿದ್ದು, ವರದಿ ಬಂದು 1 ವಾರದೊಳಗೆ ಪರಿಹಾರವನ್ನು ನೀಡಲಾಗುತ್ತದೆ ಎಂದು ಬಳ್ಳಾರಿ ಸಂಸದ ವೈ.ದೇವೇಂದ್ರಪ್ಪ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಬೆಳೆದ ಭತ್ತ, ಜೋಳ, ಹತ್ತಿ, ಮೆಣಸಿನಕಾಯಿ, ಕಬ್ಬು, ಬಾಳೆ ಇನ್ನಿತರ ಬೆಳೆಗಳು ನೆರೆ ಹಾವಳಿಯಿಂದ ನಾಶವಾಗಿವೆ. ಪ್ರಸ್ತುತ ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಕಡಿಮೆಯಾಗಿದ್ದು, ನೆರೆ ಬಾಧಿತ ಪ್ರದೇಶಗಳಿಗೆ ಶಾಸಕರು, ಸಂಸದರು, ಅಧಿಕಾರಿಗಳು ಬೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ಹೇಳುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಹ ನೆರೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಭೇಟಿ ನೀಡಿದ್ದಾರೆ. ಜೊತೆಗೆ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗೃಹ ಸಚಿವ ಅಮಿತ್ ಶಾ ಸಹ ಭೇಟಿ ನೀಡಿ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಣೆ ಮಾಡಿ ಹೋಗಿದ್ದಾರೆ.
ಕಂಪ್ಲಿ-ಗಂಗಾವತಿ ಬ್ಯಾರೇಜ್ ಹೊಸದಾಗಿ ನಿರ್ಮಾಣ ಮಾಡುವ ಕುರಿತು ಸರ್ಕಾರದ ಗಮನಕ್ಕೆ ತರಲಾಗುತ್ತದೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಪರಿಹಾರ ದೊರೆಯುತ್ತದೆ ಎಂದು ವೈ.ದೇವೇಂದ್ರಪ್ಪ ತಿಳಿಸಿದರು.