ವಿಜಯನಗರ: ರಾಜ್ಯದ ಹೆಮ್ಮೆಯ ಐತಿಹಾಸಿಕ ತಾಣ ಹಂಪಿಯ ಪ್ರವಾಸೋದ್ಯಮಕ್ಕೆ ಮತ್ತೊಂದು ಗೌರವ ಸಂದಿದೆ. ಕೇಂದ್ರ ಸರ್ಕಾರದ ಅತ್ಯುತ್ತಮ ಪ್ರವಾಸೋದ್ಯಮ ಗ್ರಾಮ ರಾಷ್ಟ್ರೀಯ ಪ್ರಶಸ್ತಿಗೆ ಹಂಪಿ ಆಯ್ಕೆಯಾಗಿದೆ. ಹಂಪಿ ಗ್ರಾಮ ಪಂಚಾಯಿತಿಗೆ ರಾಷ್ಟ್ರೀಯ ಮಾನ್ಯತೆಯ ಗೌರವ ಒಲಿದಿದೆ. ನವದೆಹಲಿಯ ಭಾರತ್ ಮಂಟಪದಲ್ಲಿ ಪ್ರವಾಸೋದ್ಯಮ ರಾಜ್ಯ ಖಾತೆ ಸಚಿವ ಅಜಯ್ ಭಟ್ ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಹಂಪಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಜನಿ ಷಣ್ಮುಖ ಗೌಡ ಪ್ರಶಸ್ತಿ ಸ್ವೀಕಾರ ಮಾಡಿದರು.
ಪ್ರಶಸ್ತಿಗೆ 15 ಗ್ರಾಮ ಪಂಚಾಯಿತಿಗಳು ಸೇರಿ 729 ಅರ್ಜಿಗಳು ಸಲ್ಲಿಕೆಯಾಗಿದ್ದವು. ರಾಜ್ಯದಿಂದ ಆಯ್ಕೆಯಾಗಿರುವ ಏಕೈಕ ಗ್ರಾಮ ಪಂಚಾಯಿತಿ ಹಂಪಿ. ರಾಜ್ಯ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಅನಿತಾ ಭಾಸ್ಕರ್ ಈ ಮಾಹಿತಿ ನೀಡಿದ್ದಾರೆ. ಯುನೆಸ್ಕೋ ಪಾರಂಪರಿಕ ತಾಣದ ಪಟ್ಟಿಗೆ ಹಂಪಿ ಈಗಾಗಲೇ ಸೇರಿದೆ. ಇಲ್ಲಿನ ವಿಜಯನಗರ ಸಾಮ್ರಾಜ್ಯದ ಕಾಲದ ವಾಸ್ತುಶಿಲ್ಪಗಳು, ದೇವಾಲಯಗಳು, ಕಲ್ಲಿನ ಕಟ್ಟಡಗಳು ಇಡೀ ಜಗತ್ತಿನ ಗಮನ ಸೆಳೆದಿದ್ದು, ಜಗತ್ತಿನಾದ್ಯಂತದಿಂದ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
ಬಾಳೆ ನಾರಿನಿಂದ ಮಾಡುವ ಕರಕುಶಲ ವಸ್ತುಗಳ ಕೌಶಲ್ಯವೃದ್ಧಿ, ಮಳಿಗೆಗಳು ಹಾಗೂ ಹೋಂಸ್ಟೇಗಳಲ್ಲಿ ಪ್ರವಾಸಿ ಸೌಲಭ್ಯಕ್ಕೆ ಪೂರಕ ವಾತಾವರಣ, ಇದಕ್ಕೆ ಪೂರಕವಾಗಿ ಸ್ಥಳೀಯರು ತೊಡಗಿಸಿಕೊಂಡಿದ್ದನ್ನು ಗಮನಿಸಿ ಹಂಪಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಹಂಪಿ ಗ್ರಾಮ ಪಂಚಾಯಿತಿಗೆ ಪ್ರಶಸ್ತಿ ಒಲಿದು ಬಂದಿದ್ದಕ್ಕೆ ಇತರ ಸದಸ್ಯರು ಸಂತಸ ವ್ಯಕ್ತಪಡಿಸಿದ್ದು, ಹಂಪಿ ನಿವಾಸಿಗಳಿಗಳಿಂದಲೂ ಸಂತಸ ವ್ಯಕ್ತವಾಗಿದೆ.
ಇದನ್ನೂ ಓದಿ: Watch: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಭ್ರಮದ ವಿಶ್ವ ಪ್ರವಾಸೋದ್ಯಮ ದಿನ