ಬಳ್ಳಾರಿ: ರಾಜ್ಯದ ನಾನಾ ಜಿಲ್ಲೆಗಳಿಗೆ ಕೂಲಿ ಅರಸಿ ಹೋಗಿದ್ದ ಗಣಿಜಿಲ್ಲೆಯ 13,500 ಕುಟುಂಬಸ್ಥರಿಗೆ ನರೇಗಾ ಯೋಜನೆ ಆಸರೆಯಾಗಿದ್ದು, ಇದರಿಂದ 45,500 ಮಂದಿ ತಮ್ಮ ಜೀವನ ಸಾಗಿಸುತ್ತಿದ್ದಾರೆ.
ಲಾಕ್ಡೌನ್ಗಿಂತ ಮುಂಚೆಯೇ ರಾಜ್ಯದ ನಾನಾ ಜಿಲ್ಲೆಗಳಿಗೆ ಜಿಲ್ಲೆಯಿಂದ ಕೂಲಿ ಅರಸಿ ವಲಸೆ ಹೋಗಿದ್ದ ಕೂಲಿಕಾರ್ಮಿಕರು ವಾಪಸ್ ಆಗಿದ್ದು, ಸಾವಿರಾರು ಕೂಲಿ ಕಾರ್ಮಿಕರು ಈಗ ನರೇಗಾ ಯೋಜನೆಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ.
ಈ ಕುರಿತು ಈ ಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ (ಅಭಿವೃದ್ಧಿ) ಅಮರೇಶ ನಾಯ್ಕ, ಜಿಲ್ಲೆಯನ್ನ ರಾಜ್ಯದ 30 ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಮಾನವ ದಿನಗಳ ಸೃಜನೆಯಲ್ಲೂ ಮುಂದಿದೆ. ಅಂದಾಜು 90 ಲಕ್ಷ ಮಾನವ ದಿನಗಳ ಸೃಜನೆಯ ಗುರಿ ಹೊಂದಲಾಗಿತ್ತು. ಜೂನ್ ತಿಂಗಳಲ್ಲಿ ಸುಮಾರು 46 ಲಕ್ಷ ಮಾನವ ದಿನಗಳನ್ನ ಸೃಜನೆ ಮಾಡಲಾಗಿದೆ. ಈ ತಿಂಗಳೊಳಗೆ ಕೇವಲ 28 ಲಕ್ಷ ಮಾನವ ದಿನಗಳನ್ನ ಸೃಜನೆ ಮಾಡಬೇಕಿತ್ತು. ಆದರೆ, ಅದು ಹೆಚ್ಚಾಗಿದೆ ಎಂದರು.
ರಾಜ್ಯ ಸರ್ಕಾರ ನಿಗದಿಪಡಿಸಿರುವ ಐದು ಪ್ಯಾರಾ ಮೀಟರ್ ಸಾಧನೆಯಲ್ಲೂ ಗಣಿನಾಡು ಬಳ್ಳಾರಿ ಜಿಲ್ಲೆಯು ಮುಂದಿದೆ. ಹೀಗಾಗಿ, ಇಡೀ ರಾಜ್ಯದಲ್ಲಿಯೇ ಬಳ್ಳಾರಿ ಜಿಲ್ಲೆಯು ನರೇಗಾ ಯೋಜನೆಯಲ್ಲಿ ಮುಂಚೂಣಿಯ ಪ್ರಗತಿ ಸಾಧಿಸಿದೆ. ಪ್ರಥಮ ಸ್ಥಾನವನ್ನೂ ಕೂಡ ಗಿಟ್ಟಿಸಿಕೊಂಡಿದೆ. ಅಂದಾಜು 90 ಲಕ್ಷ ಮಾನವ ದಿನಗಳ ಸೃಜನೆಯಲ್ಲೂ ಮುಂದಿದೆ. ಇದರಿಂದ ನಮಗೆ ಹೆಮ್ಮೆ ಎನಿಸುತ್ತದೆ ಎಂದರು.