ಬಳ್ಳಾರಿ: ಮಳಲಿ ಮಸೀದಿ ವಿಚಾರ ಅದು ಕಾನೂನಾತ್ಮಕ ವಿಷಯ. ಎರಡು ಕಡೆಯಿಂದಲೂ ನ್ಯಾಯಾಲಯಕ್ಕೆ ಹೋಗಿದ್ದಾರೆ. ಈ ಸಂದರ್ಭದಲ್ಲಿ ಆ ಬಗ್ಗೆ ಹೆಚ್ಚು ಮಾತನಾಡುವುದು ಸೂಕ್ತವಲ್ಲ ಎಂದು ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು.
ಸಂಡೂರು ತಾಲೂಕಿನ ತೋರಣಗಲ್ನ ಖಾಸಗಿ ಹೋಟೆಲ್ನಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ಎಸ್ಟಿ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಹನುಮನ ಜನ್ಮಸ್ಥಳ ನಾಸಿಕ ಎಂದು ಮಹಾರಾಷ್ಟ್ರ ಸರ್ಕಾರದಿಂದ ವಾದ ನಡೆದಿದೆ. ಉಲ್ಲೇಖಗಳ ಪ್ರಕಾರ, ಅಂಜನಾದ್ರಿ ಬೆಟ್ಟವೇ ಹನುಮನ ಜನ್ಮಸ್ಥಳವಾಗಿದೆ ಎಂದರು.
ನಟ ಜಗ್ಗೇಶ್ಗೆ ರಾಜ್ಯಸಭಾ ಸದಸ್ಯತ್ವ ವಿಚಾರ ಕುರಿತು ಮಾತನಾಡಿ ಜಗ್ಗೇಶ್ ನಮ್ಮ ಪಕ್ಷದಲ್ಲಿ ಹತ್ತಾರು ವರ್ಷಗಳಿಂದ ಇದ್ದಾರೆ. ಸದ್ಯ ಅವರು ಪಕ್ಷದ ವಕ್ತಾರರು ಇದ್ದಾರೆ. ಸಂಪುಟ ವಿಸ್ತರಣೆ ವಿಚಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಚಾರ ಎಂದು ಮೂರು ಬಾರಿ ಪುನರುಚ್ಚರಿಸಿದರು. ಮಂಗಳೂರಿನಲ್ಲಿ ಮತ್ತೆ ಹಿಜಾಬ್ ವಿವಾದ ಹಿನ್ನೆಲೆ ನ್ಯಾಯಾಲಯದ ತೀರ್ಪನ್ನು ಎಲ್ಲರೂ ಪಾಲಿಸಬೇಕು. ಯಾವುದೇ ವಿಚಾರ ಇದ್ರು ನ್ಯಾಯಾಲಯದ ಆದೇಶವನ್ನ ಎಲ್ಲರೂ ಪಾಲನೆ ಮಾಡಬೇಕು.
ಸರ್ಕಾರ ಕೂಡ ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಳ್ಳಲಿದೆ ಎಂದು ಕಟೀಲ್ ತಿಳಿಸಿದರು.
ವಾಲ್ಮೀಕಿ ಸ್ವಾಮೀಜಿ ಜೊತೆ ಸಿಎಂ ನಿರಂತರ ಸಂಪರ್ಕದಲ್ಲಿ ಇದ್ದಾರೆ. ಎಲ್ಲ ಸಮುದಾಯಗಳಿಗೆ ನ್ಯಾಯ ಕೊಡುವ ಕೆಲಸ ಸರ್ಕಾರ ಮಾಡಲಿದೆ. ಈಗಾಗಲೇ ಮುಖ್ಯಮಂತ್ರಿಗಳು ಕಾನೂನು ತೊಡಕು ನಿವಾರಿಸಿ ನ್ಯಾಯ ಕೊಡುವ ಕೆಲಸ ಮಾಡುತ್ತಾರೆ. ಕೆಲವು ಕಾನೂನು ತೊಡಕುಗಳಿವೆ. ಅವುಗಳನ್ನು ಸರಿಪಡಿಸಿ ಮೀಸಲಾತಿ ನೀಡ್ತಾರೆ. ಬಿಬಿಎಂಪಿ, ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್ ಚುನಾವಣೆಗೂ ಪಕ್ಷ ಸಿದ್ಧವಿದೆ ಎಂದರು.
ಓದಿ: ಮೂಲ ಸೌಕರ್ಯ ಕೊರತೆ : ಚುನಾವಣೆ ಬಹಿಷ್ಕರಿಸಲು ಗ್ರಾಮಸ್ಥರ ನಿರ್ಧಾರ