ವಿಜಯನಗರ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ತುಂಗಭದ್ರಾ ನದಿ ತೀರದ ಸುಕ್ಷೇತ್ರ ಮೈಲಾರ ಲಿಂಗೇಶ್ವರ ಜಾತ್ರೆ ಗೊರವರ ಸರಪಳಿ ಪವಾಡ ಹಾಗೂ ಭಗಣಿ ಗೂಟದ ಪವಾಡದೊಂದಿಗೆ ತೆರೆ ಕಂಡಿದೆ.
ಡಂಕಣ ಮರಡಿಯಲ್ಲಿ ರಾಕ್ಷಸರನ್ನು ಸಂಹರಿಸಿ ವಿಜಯ ಸಾಧಿಸಿದ ಸವಿ ನೆನಪಿಗಾಗಿ ಶತಮಾನಗಳ ಕಾಲದಿಂದ ದೇಗುಲದ ಬಾಬ್ತುದಾರರಾಗಿರುವ ಕಂಚಿವೀರರು ಹಾಗೂ ಗೊರವರು ಸರಪಳಿ ಪವಾಡಗಳನ್ನು ಮಾಡುತ್ತಾ ಬಂದಿದ್ದಾರೆ. ಪ್ರತಿವರ್ಷ ಕಾರ್ಣಿಕ ಶುಭ ನುಡಿದ ಬಳಿಕ ಸರಪಳಿ ಮತ್ತು ಭಗಣಿ ಗೂಟದ ಪವಾಡಗಳು ನಡೆಯುತ್ತವೆ. ಅದರಂತೆ ಮಂಗಳವಾರ ಕೂಡ ಪವಾಡಗಳು ಜರುಗಿದವು.
ಆದಿ ಕರ್ನಾಟಕ ಜನಾಂಗದ ಕಂಚವೀರರೆಂದು ಕರೆಯುವ ಇವರು, ಭಗಣಿಗೂಟ ಪವಾಡಗಳನ್ನು ಮಾಡುತ್ತಾರೆ. ಗೊರವರು ಸರಪಳಿ ಪವಾಡ ಮಾಡೋದು ಸಂಪ್ರಾದಾಯವಾಗಿದೆ. ಪವಾಡ ಮಾಡುವ ಕಂಚವೀರರು ನಾನಾ ರೀತಿಯ ಐದು ವೇಷಗಳನ್ನು ಧರಿಸಿರುತ್ತಾರೆ. ವೀರಭದ್ರನ ಅವತಾರದಲ್ಲಿ ಕಾಲಿಗೆ ಭಗಣಿಗೂಟ ಬಡಿದುಕೊಳ್ಳುವುದು, ಕಾಲಿಗೆ ರಂಧ್ರ ಕೊರೆದು ಮುಳ್ಳು ದಾಟಿಸುವುದು, ಮುಂಗೈಗೆ ಕಬ್ಬಿಣ ಆರತಿ ಚುಚ್ಚಿ ದೀಪ ಬೆಳಗಿಸುವುದು, ಗೊರವರು ಕಬ್ಬಿಣದ ಸರಪಳಿ ಹರಿಯುವುದು ಹೀಗೆ ಹತ್ತಾರು ಪವಾಡಗಳು ನೆರೆದಿದ್ದ ಭಕ್ತರ ಗಮನ ಸೆಳೆದವು.
ಈ ಪವಾಡಗಳನ್ನು ಮೈಲಾರ ಗ್ರಾಮದ ಕಂಚಿವೀರರು ವಂಶಪರಂಪಾರ್ಯವಾಗಿ ನಡೆಸಿಕೊಂಡು ಬಂದಿದ್ದು, ಪವಾಡ ಮಾಡುವ ಮುನ್ನಾ ದಿನ ಇವರು ಒಂದು ದಿನದ ಉಪವಾಸ ವ್ರತದಲ್ಲಿರುತ್ತಾರೆ. ವ್ರತಕ್ಕೆ ಭಂಗ ಬಾರದಂತೆ ಅವರ ಮನೆಯಲ್ಲಿ ಮಹಿಳೆಯರು ಇಲ್ಲದಂತೆ ನೋಡಿಕೊಳ್ಳುತ್ತಾರೆ. ಕಾರಣ ಪವಾಡಗಳಿಗೆ ತೊಂದರೆ ಆಗದಂತೆ ಮಡಿಯಿಂದ ಪವಾಡಗಳನ್ನು ಮಾಡಬೇಕಿದೆ ಎನ್ನುತ್ತಾರೆ ಕಂಚಿವೀರರು. ಈ ಪವಾಡಗಳನ್ನು ಮಾಡಿದಾಗ ಮಾತ್ರ ಅವರಿಗೆ ಮದುವೆ ಮಾಡಿಕೊಳ್ಳಲು ಅವಕಾಶವಿದೆ. ಆದ್ದರಿಂದ ಯುವಕರೂ ಕೂಡ ಪವಾಡ ಮಾಡಬೇಕು ಎನ್ನುತ್ತಾರೆ ಇಲ್ಲಿನ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್.