ವಿಜಯನಗರ: ಲೌಕಿಕ ಜಗತ್ತಿಗಿಂತ ಅಧ್ಯಾತ್ಮಿಕ ಜಗತ್ತೇ ಉತ್ತಮ. ಕ್ಷಣಿಕ,ಆಕರ್ಷಣೀಯ ಆಧುನಿಕ ವೈಭವ ಜೀವನವನ್ನು ತ್ಯಾಗ ಮಾಡಿ,ಜಪ ತಪ ಅಹಿಂಸೆ ಶಾಂತಿ ಮೋಕ್ಷ ಸಾಧನೆ ಸಾರುವ ಜೈನ ಧರ್ಮದ ಸನ್ಯಾಸ ದೀಕ್ಷೆಯನ್ನು ಹತ್ತೊಂಬತ್ತು ವರ್ಷದ ಹರೆಯದ ಯುವತಿಯೊಬ್ಬಳು ಹೊಸಪೇಟೆಯಲ್ಲಿಂದು ಸ್ವೀಕರಿಸಿದಳು.
ಹೊಸಪೇಟೆ ಮೂಲದ ಶ್ರೀಮಂತ ಕುಟುಂಬಕ್ಕೆ ಸೇರಿದ ಜೈನ ಶ್ವೇತಾಂಬರ ಸಮುದಾಯದ ಮುಮುಕ್ಷಾ ವಿಧಿ ಕುಮಾರಿ ಎಂಬ ಯುವತಿ ಬುಧವಾರ ಸನ್ಯಾಸ ದೀಕ್ಷೆ ಸ್ವೀಕರಿಸಿದರು. ದೀಕ್ಷೆ ಸ್ವೀಕರಿಸುವ ಮೂಲಕ ಕುಟುಂಬದ ಬಂಧನದಿಂದ ಬಿಡುಗೊಡೆಗೊಂಡು ಸನ್ಯಾಸದತ್ತ ಸಾಗಿದಳು.
ದೀಕ್ಷಾ ಸ್ವೀಕರಿಸುವ ಸಮಾರಂಭ : ಶ್ರೀ ಆದಿನಾಥ ಜೈನ ಶ್ವೇತಾಂಬರ ಸಂಘದ ವತಿಯಿಂದ ಸನ್ಯಾಸ ದೀಕ್ಷೆ ಸ್ವೀಕರಿಸುವ ಕಾರ್ಯಕ್ರಮ ಮಲ್ಲಿಗೆ ಹೋಟೆಲ್ ನಲ್ಲಿ ಅದ್ಧೂರಿಯಾಗಿ ನೆರವೇರಿತು. ಹೊಸಪೇಟೆ ಉದ್ಯಮಿ ಕಾಂತಿಲಾಲಾ ಜಿ. ಜಿರಾವಲಾ ಮತ್ತು ರೇಖಾ ದೇವಿ ಜಿರಾವಲಾ ದಂಪತಿಗಳ ನಾಲ್ವರು ಪುತ್ರಿಯರಲ್ಲಿ ಮುಮುಕ್ಷಾ ಮೂರನೇಯವರು. ಎಸ್ಸೆಸ್ಸೆಲ್ಸಿಯಲ್ಲಿ ಶೇ.94, ಪಿಯುಸಿಯಲ್ಲಿ 99 ರಷ್ಟು ಅಂಕ ಗಳಿಸಿರುವ ಈ ಯುವತಿ ತಮ್ಮ ಬಾಲ್ಯದಿಂದಲೇ ಜೈನ ಸನ್ಯಾಸ ತತ್ವಗಳಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು.
ಮುಮುಕ್ಷಾ ಅವರು ತಮ್ಮ 10 ಮತ್ತು 12ನೇ ವಯಸ್ಸಿನಲ್ಲಿ ಎರಡು ಬಾರಿ 48 ದಿನಗಳ ಉಪಧ್ಯಾನ ತಪವನ್ನೂ (ಕಠಿಣ ವೃತ ಅಚರಣೆ ಮಾಡುವುದು ) ಸಂಪನ್ನಗೊಳಿಸಿದ್ದಾರೆ. ಕೊನೆಗೂ ಮುಮುಕ್ಷಾ ಬುಧವಾರ ಸನ್ಯಾಸ ದೀಕ್ಷೆ ಸ್ವೀಕಾರ ಮಾಡಿದರು. ಆದಿನಾಥ ಜೈನ ಶ್ವೇತಾಂಬರ ಮುನಿಗಳಾದ ನರರತ್ನ ಸೂರಿಶ್ವರಜೀ ಅವರ ಸಾನ್ನಿಧ್ಯದಲ್ಲಿ ಜೈನ ದೀಕ್ಷೆ ಸ್ವೀಕಾರ ಜರುಗಿತು.
ಅದ್ದೂರಿ ಶೋಭಾಯಾತ್ರೆ: ನಗರದಲ್ಲಿ ಸನ್ಯಾಸ ದೀಕ್ಷೆ ಸಮಾರಂಭದ ಅಂಗವಾಗಿ ಅದ್ದೂರಿ ಶೋಭಾಯಾತ್ರೆಯನ್ನು ಜೈನ ಸಮುದಾಯ ನಡೆಸಿತು. ಈ ಶೋಭಾಯಾತ್ರೆಯಲ್ಲಿ ಆಧ್ಯಾತ್ಮಿಕ ಜೀವನ ಅಪ್ಪಿಕೊಳ್ಳುತ್ತಿರುವ ಸಂಭ್ರಮ ಆನಂದವನ್ನು ಮುಮುಕ್ಷಾ ಕುಣಿಯುವ ಮೂಲಕ ಪ್ರದರ್ಶಿಸಿದರು.
ಆಡಂಬರ ಜೀವನದಲ್ಲಿ ವೈರಾಗ್ಯ ಬಂದು ಸನ್ಯಾಸ ದೀಕ್ಷೆ ಸ್ವೀಕಾರ: ಜೈನ ಶ್ವೇತಾಂಬರ ಮುನಿಗಳಾದ ನರರತ್ನ ಸೂರಿಶ್ವರಜೀ ಮಾತನಾಡಿ, ದೇಶದಲ್ಲಿ ಪ್ರತಿ ವರ್ಷ 300 ಯುವಕ- ಯುವತಿಯರು ಸನ್ಯಾಸತ್ವ ಸ್ವೀಕರಿಸುತ್ತಿದ್ದಾರೆ. ಒಮ್ಮೆ ಸನ್ಯಾಸತ್ವ ಸೀಕಾರ ಮಾಡಿದವರು. ಲೌಕಿಕ ಬದುಕಿಗೆ ಮರಳಿದ ಉದಾಹರಣೆಗಳಿಲ್ಲ. ಅಷ್ಟರ ಮಟ್ಟಿಗೆ ಜೈನ ಸನ್ಯಾಸತ್ವದಲ್ಲಿ ನಂಬಿಕೆಯನ್ನಿಟ್ಟಿರುತ್ತಾರೆ.
ಸನ್ಯಾಸತ್ವ ಸ್ವೀಕರಿಸಿರುವ ಬಹುತೇಕರು ಕೋಟ್ಯಧೀಶರು, ಅವರ ತಂದೆ, ತಾಯಿಗಳು ಸಿರಿವಂತರಾಗಿದ್ದು, ಮನೆಯಲ್ಲಿ ಯಾವುದೇ ಕೊರತೆಗಳಿರುವುದಿಲ್ಲ. ಆದರೆ, ಆಡಂಬರದ ಜೀವನ, ಮಾನವ ಸಂಬಂಧಗಳಲ್ಲಿ ಯಾವುದೇ ಅರ್ಥವಿಲ್ಲ ಎಂಬ ವೈರಾಗ್ಯ ಬಂದು ಸನ್ಯಾಸ ದೀಕ್ಷೆ ಸ್ವೀಕರಿಸುತ್ತಾರೆ ಎಂದು ಜೈನ ಮುನಿಗಳು ತಿಳಿಸಿದ್ದಾರೆ.
ವ್ಯಾಮೋಹ ಇಲ್ಲದ ಜೈನ ಯತಿಗಳು: ಯಾವುದೇ ವಸ್ತುಗಳ ಮೇಲೆ ವ್ಯಾಮೋಹ ಇಲ್ಲದೇ ಕೇವಲ ಭಿಕ್ಷೆಯಿಂದಲೇ ಹೊಟ್ಟೆ ತುಂಬಿಸಿಕೊಳ್ಳುವ ಜೈನ ಯತಿಗಳು, ಜೈನ ಸಮುದಾಯ ಮಾತ್ರವಲ್ಲದೇ, ಶುದ್ಧ ಸಸ್ಯಹಾರಿ ಕುಟುಂಬದಿಂದ ಆತಿಥ್ಯ ಆಹ್ವಾನ ಬಂದರೆ ಖಂಡಿತಾ ಭಿಕ್ಷೆ ಸ್ವೀಕರಿಸುತ್ತಾರೆ ಎಂದು ಜೈನಮುನಿಗಳು ಈ ಸಂದರ್ಭದಲ್ಲಿ ಹೇಳಿದರು.
ಮುಮುಕ್ಷಾ ವಿಧಿ ಕುಮಾರಿ ಜೈನ ದೀಕ್ಷೆ ಸ್ವೀಕಾರ ಮಾಡುವ ಮೂಲಕ ಅಲೌಕಿಕ ಪಥವನ್ನು ಪ್ರವೇಶಿಸಿದ ಆರಂಭದ ಕ್ಷಣಗಳನ್ನು ಸಾವಿರಾರು ಜನರು ಕಣ್ತುಂಬಿಕೊಂಡರು. ಈ ಸಂದರ್ಭದಲ್ಲಿ ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್, ಮಾಜಿ ಶಾಸಕ ಎಚ್. ಆರ್. ಗವಿಯಪ್ಪ, ಕಾಂಗ್ರೆಸ್ ಮುಖಂಡ ಇಮಾಜ್ ನಿಯಾಜಿ, ಬಿಜೆಪಿಯ ಸಿದ್ದಾರ್ಥ್ ಸಿಂಗ್ ಸೇರಿದಂತೆ ಮತ್ತಿತರ ಗಣ್ಯರು ಭಾಗವಹಿಸಿದ್ದರು.
ಇದನ್ನೂಓದಿ:ಹಾವೇರಿಯ ಪ್ರಸಿದ್ದ ಏಲಕ್ಕಿ ಹಾರ: ಜಾಗತಿಕ ನಾಯಕರ ಕೊರಳೇರಿದ ಹೆಗ್ಗಳಿಕೆ!