ಬಳ್ಳಾರಿ: ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಇಂದಿರಾ ನಗರದಲ್ಲಿ ನಡೆದಿದೆ. ಪತಿ-ಪತ್ನಿಯ ಜಗಳದಲ್ಲಿ ಮುಗ್ಧ ಕಂದಮ್ಮಗಳು ಸಾವಿನ ಮನೆ ಸೇರಿವೆ.
ಇಂದಿರಾ ನಗರದ ಮನೆಯ ಮುಂಭಾಗದಲ್ಲಿರುವ ನೀರಿನ ಟ್ಯಾಂಕ್ನೊಳಗೆ ಮಹಿಳೆ ತನ್ನಿಬ್ಬರು ಮಕ್ಕಳನ್ನು ಮುಳುಗಿಸಿದ್ದಾಳೆ. ಬಳಿಕ ತಾನೂ ಕೂಡ ನೀರಿನೊಳಗೆ ಮುಳುಗಿ ಸಾವಿಗೆ ಶರಣಾಗಿದ್ದಾರೆ. ಇಂದಿರಾ ನಗರದ ಏಳನೇ ಅಡ್ಡರಸ್ತೆಯ ನಿವಾಸಿ ಸಿದ್ದಪ್ಪ (30) ಹಾಗೂ ಪತ್ನಿ ಸುನೀತಾ (25) ಅವರ ನಡುವೆ ಕೌಟುಂಬಿಕ ಕಲಹ ನಡೆಯುತ್ತಿತ್ತು. ಅದರಂತೆ ನಿನ್ನೆಯ ದಿನವೂ ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರ ಮಧ್ಯೆ ಜಗಳ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದರಿಂದ ಮನನೊಂದ ಪತ್ನಿ ಸುನೀತಾ ತನ್ನ 2 ವರ್ಷದ ಮಗ ಹಾಗೂ 10 ತಿಂಗಳ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಕುಟುಂಬ ಮೂಲಗಳು ತಿಳಿಸಿವೆ. ಈ ಕುರಿತು ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.