ವಿಜಯನಗರ: ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ನಾಡು ಹಾಗೂ ನೂತನ ಜಿಲ್ಲೆ ವಿಜಯನಗರದ ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ.
ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ತುಂಗಭದ್ರಾ ನಾಡಿನಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಬಿಜೆಪಿ ಭಾರಿ ತಂತ್ರ ರೂಪಿಸಿದೆ. ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಲು ಹಾಗೂ ಮತದಾರರನ್ನು ಸೆಳೆಯಲು ಮೋದಿ ಬೃಹತ್ ಪ್ರಮಾಣದ ವೇದಿಕೆಯಲ್ಲಿ ಪ್ರಚಾರ ಭಾಷಣ ಮಾಡಲಿದ್ದಾರೆ.
ವಿಜಯನಗರ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಹೂವಿನಹಡಗಲಿ, ಹರಪನಹಳ್ಳಿ ಹಾಗೂ ಕೊಪ್ಪಳ ಜಿಲ್ಲೆಯ ಕೊಪ್ಪಳ, ಗಂಗಾವತಿ, ಯಲಬುರ್ಗಾ ಅಭ್ಯರ್ಥಿಗಳ ಪರ ಮೇ 2 ರಂದು ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದ ಬೃಹತ್ ವೇದಿಕೆಯಲ್ಲಿ ಮೋದಿ ಅವರು ಪ್ರಚಾರ ನಡೆಸಲಿದ್ದಾರೆ. ಅಂದಾಜು 2 ಲಕ್ಷಕ್ಕೂ ಅಧಿಕ ಕಾರ್ಯಕರ್ತರು, ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಹೊಸಪೇಟೆ ಬಿಜೆಪಿ ಪ್ರಚಾರ ಸಮಾವೇಶಕ್ಕೆ ಪ್ರಧಾನಿ ಬರುತ್ತಿರುವುದು ಕಾರ್ಯಕರ್ತರಲ್ಲಿ ಸಂತಸ ತಂದಿದೆ. ಇದೇ ಪ್ರಥಮ ಬಾರಿಗೆ ಮೋದಿ ಈ ಭಾಗಕ್ಕೆ ಬರುತ್ತಿರುವುದು ಖುಷಿ ತಂದಿದೆ ಎನ್ನುತ್ತಿದ್ದಾರೆ ಸ್ಥಳೀಯ ಬಿಜೆಪಿ ಕಾರ್ಯಕರ್ತರು.
ಕಲ್ಲಿನ ರಥ ಉಡುಗೊರೆ: ಹೊಸಪೇಟೆಯಲ್ಲಿ ಪ್ರಧಾನಿ ಮೋದಿ ಹವಾ ಇರಲಿದ್ದು, ವಿಜಯನಗರ ಹಾಗೂ ಕೊಪ್ಪಳದ 8 ಕ್ಷೇತ್ರಗಳ ಅಭ್ಯರ್ಥಿ ಪರ ಚುನಾವಣಾ ಪ್ರಚಾರ ನಡೆಸಲಿರುವ ಪ್ರಧಾನಿಗೆ ಪಂಚಲೋಹದ ಅಥವಾ ಬೆಳ್ಳಿಯಿಂದ ಮಾಡಿರುವ ವಿಶ್ವವಿಖ್ಯಾತ ಹಂಪಿ ಕಲ್ಲಿನ ರಥ ವಿಶೇಷ ಉಡುಗೊರೆ ನೀಡಲು ಸಿದ್ದತೆ ಮಾಡಲಾಗಿದೆ.
ನರೇಂದ್ರ ಮೋದಿ ಮೇ 2ರಂದು ಜಿಲ್ಲಾ ಕೇಂದ್ರ ಹೊಸಪೇಟೆಗೆ ಮಧ್ಯಾಹ್ನ ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದಾರೆ. ಹೆಲಿಪ್ಯಾಡ್ ಸಮೀಪದಲ್ಲಿ ಬರುವ ಅನಂತಶಯನಗುಡಿ ರೈಲ್ವೆ ಗೇಟ್‌ನಲ್ಲಿ ಮಧ್ಯಾಹ್ನ 12.35 ರಿಂದ 1.15 ರವರೆಗೆ ರೈಲ್ವೆ ಸಂಚಾರ ನಿರ್ಬಂಧಿಸಲಾಗಿದೆ. ಮೇ 01ರಿಂದ ಮೇ 02ರ ವರೆಗೆ ಹೊಸಪೇಟೆ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಡ್ರೋನ್ ಕ್ಯಾಮರಾ ಹಾರಾಟ ನಿಷೇಧಿಸಿ ಜಿಲ್ಲಾ ದಂಡಾಧಿಕಾರಿ ಟಿ.ವೆಂಕಟೇಶ್ ಆದೇಶಿಸಿದ್ದಾರೆ.
ಬಿಗಿ ಭದ್ರತೆ: ಹೊಸಪೇಟೆಯಲ್ಲಿ ಮೋದಿ ಬಿಜೆಪಿ ಪರ ಪ್ರಚಾರಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ. 5 ಜನ ಎಸ್ಪಿ, 12 ಡಿವೈಎಸ್ಪಿ, 17 ಪಿಐ, 55 ಪಿಎಸ್‌ಐ, 600 ಪೊಲೀಸ್ ಪೇದೆಗಳು, 300 ಜನ ಹೋಮ್‌ಗಾರ್ಡ್ ಸೇರಿದಂತೆ ಇತರೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈಗಾಗಲೇ ಶ್ವಾನದಳ, ಬಾಂಬ್ ನಿಷ್ಕ್ರಿಯ ದಳದಿಂದ ತಪಾಸಣೆ ಮಾಡಲಾಗುತ್ತಿದೆ ಎಂದು ವಿಜಯನಗರ ಎಸ್ಪಿ ಶ್ರೀಹರಿಬಾಬು ತಿಳಿಸಿದ್ದಾರೆ.
ಹೆಲಿಕ್ಯಾಪ್ಟರ್‌ಗಳ ಟ್ರಯಲ್ ರನ್: ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರ ನಿಮಿತ್ತ ಹೊಸಪೇಟೆಗೆ ಮೇ 2ರಂದು ಪ್ರಧಾನಿ ಮೋದಿ ಭೇಟಿ ನೀಡುತ್ತಿದ್ದು ನಗರದ ಹೊರವಲಯದ ಆಂಜನೇಯ ದೇಗುಲದ ಬಳಿ ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಎಸ್.ಪಿ ಶ್ರೀಹರಿಬಾಬು ನೇತೃತ್ವದಲ್ಲಿ ಎಸ್‌ಪಿಜಿ ತಂಡದಿಂದ ಪರಿಶೀಲನೆ ನಡೆಸಿದೆ. ಎರಡು ಸೇನಾ ಹೆಲಿಕಾಪ್ಟರ್‌ಗಳು ಭಾನುವಾರ ನಗರದ ಮೇಲೆ ಹೆಲಿಕಾಪ್ಟರ್ ಪ್ರದರ್ಶನ ಹಾಕಿದವು.
ಇದನ್ನೂಓದಿ: 'ಮನ್ ಕಿ ಬಾತ್' 100 ಆಯಿತು; ಈಗಲಾದರೂ ‘ಜನ್ ಕಿ ಬಾತ್' ಕೇಳುತ್ತಿರಾ? : ಸಿದ್ದರಾಮಯ್ಯ