ಬಳ್ಳಾರಿ: ಲಾಕ್ ಡೌನ್ ಹಿನ್ನೆಲೆಯಲ್ಲಿ ಇಲ್ಲಿನ ಎಪಿಎಂಸಿ ಮಾರುಕಟ್ಟೆಗೆ ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಎಪಿಎಂಸಿ ಮಾರುಕಟ್ಟೆ ಅವ್ಯವಸ್ಥೆಯ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಬೆಳಿಗ್ಗೆ 7 ಗಂಟೆಗೆ ಸುಮಾರಿಗೆ ದಿಢೀರನೆ ಭೇಟಿ ನೀಡಿ ಎಪಿಎಂಸಿ ಕಾರ್ಯದರ್ಶಿ ಹಾಗೂ ಸಿಬ್ಬಂದಿಗೆ ಅಚ್ಚರಿ ಮೂಡಿಸಿದರಲ್ಲದೇ ವಾರದ ಸಂತೆ ಮಾರುಕಟ್ಟೆಯಂತೆ ಭಾಸವಾಗುತ್ತಿದ್ದ ವಾತಾವರಣ ಕಂಡು ಕಾರ್ಯದರ್ಶಿ ಕೆ.ಮೋಹನ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೇ, ಎಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟಗಾರರ ಹಾಗೂ ಸಾರ್ವಜನಿಕರ ವಿರುದ್ಧವೂ ಅವರು ಹರಿಹಾಯ್ದರು.
ತರಕಾರಿ ಖರೀದಿಸಲು ಮುಗಿಬಿದ್ದವರಿಗೆ ಸಾಮಾಜಿಕ ಅಂತರ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.
ಮಾಸ್ಕ್ ವಿತರಣೆ: ಇದೇ ವೇಳೆ ಎಪಿಎಂಸಿ ಮಾರುಕಟ್ಟೆಯಲ್ಲಿರುವ ಸಾರ್ವಜನಿಕರು ಹಾಗೂ ತರಕಾರಿ ಮಾರಾಟಗಾರರಿಗೆ ಮಾಸ್ಕ್ ವಿತರಿಸಿದರು. ಮಾಸ್ಕ್ಗಾಗಿ ಮುಗಿಬಿದ್ದವರನ್ನು ಪೊಲೀಸರು ಲಾಠಿ ಹಿಡಿದು ಚದುರಿಸಿದರು.
ಬಳಿಕ ಮಾತನಾಡಿದ ಶಾಸಕ ಸೋಮಶೇಖರ ರೆಡ್ಡಿ, ಎಪಿಎಂಸಿ ಮಾರುಕಟ್ಟೆಯಲ್ಲಿ ಸಂಪೂರ್ಣ ಅವ್ಯವಸ್ಥೆ ಕಂಡುಬರುತ್ತಿದೆ. ಇಲ್ಲಿ ಜನರು ಸಾಮಾಜಿಕ ಅಂತರ ಕೂಡ ಕಾಯ್ದುಕೊಳ್ಳುತ್ತಿಲ್ಲ. ಹೀಗಾಗಿ, ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಬಳಿ ಈ ದಿನವೇ ಅವ್ಯವಸ್ಥೆ ಸರಿಪಡಿಸುವಂತೆ ಮಾತನಾಡುವೆ ಎಂದು ತಿಳಿಸುವೆ ಎಂದು ಹೇಳಿದ್ದಾರೆ.