ಬಳ್ಳಾರಿ : ಅಖಂಡ ಬಳ್ಳಾರಿ ಜಿಲ್ಲೆ ಒಗ್ಗೂಡಲು ಇನ್ನೂ ಆರು ತಿಂಗಳಾದರೂ ಕಾಲಾವಕಾಶ ಬೇಕಿದೆ ಎಂದು ಬಳ್ಳಾರಿ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಹೇಳಿದರು.
ಬಳ್ಳಾರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆ ಕುರಿತು ತಮ್ಮ ಅಸಮಾಧಾನದ ಬಗ್ಗೆ ಸಿಎಂ ಬಿಎಸ್ವೈ ಗಮನಕ್ಕೆ ತಂದಿರುವೆ. ಅವರು ಇಬ್ಬರನ್ನೂ (ಸೋಮಶೇಖರ್ ರೆಡ್ಡಿ-ಆನಂದ್ ಸಿಂಗ್) ಕೂರಿಸಿ ಮಾತುಕತೆ ಮಾಡುವುದಾಗಿ ತಿಳಿಸಿದ್ದಾರೆ. ಹೀಗಾಗಿ, ಬಳ್ಳಾರಿಯನ್ನು ಅಖಂಡ ಜಿಲ್ಲೆಯನ್ನಾಗಿ ಉಳಿಸಬೇಕಾದರೆ, ಮುಂದಿನ ಆರು ತಿಂಗಳಾದರೂ ಕಾಲಾವಕಾಶ ಬೇಕಿದೆ. ಅಷ್ಟರೊಳಗೆ ಎಲ್ಲಾ ಗೊಂದಲಗಳಿಗೆ ತಿಲಾಂಜಲಿ ಹಾಡುವ ಕಾಲ ಸನ್ನಿಹಿತವಾಗಬಹುದು. ನನಗೆ ಈಗಲೂ ವಿಶ್ವಾಸವಿದೆ, ಬಳ್ಳಾರಿ ಜಿಲ್ಲೆ ಅಖಂಡ ಬಳ್ಳಾರಿ ಜಿಲ್ಲೆಯಾಗಿಯೇ ಉಳಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಓದಿ : 17 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಸಿಬಿಟಿ ಬಸ್ ನಿಲ್ದಾಣ: ಮಳಿಗೆ ಟೆಂಡರ್ ಕರೆದರೂ ಬಿಡ್ಗೆ ಬಾರದ ಜನ
ಇಡೀ ದೇಶಕ್ಕೆ ಮಾದರಿ ಜಿಲ್ಲೆಯನ್ನಾಗಿಸಬಹುದು : ಬಳ್ಳಾರಿ ಜಿಲ್ಲೆಯ ವ್ಯಾಪ್ತಿಗೆ ಕೇವಲ ಐದು ತಾಲೂಕುಗಳು ಮಾತ್ರ ಬರಲಿವೆ. ಜಿಲ್ಲಾ ಖನಿಜ ನಿಧಿಯ ಹಣವನ್ನು ಹೊಸಪೇಟೆ, ಸಂಡೂರು, ಬಳ್ಳಾರಿ ತಾಲೂಕುಗಳಿಗೆ ವಿನಿಯೋಗ ಮಾಡಬೇಕೆಂಬ ನಿಯಮವಿದೆ. ಸಂಡೂರು ಮತ್ತು ಬಳ್ಳಾರಿ ತಾಲೂಕು ಬಳ್ಳಾರಿ ಜಿಲ್ಲೆಯೊಳಗೆ ಬರಲಿದೆ. ವಿಜಯನಗರ ಜಿಲ್ಲೆಗೆ ಕೇವಲ ಹೊಸಪೇಟೆ ಮಾತ್ರ ಸೇರುವುದರಿಂದ ಶೇ 80ರಷ್ಟು ಅನುದಾನ ಬಳ್ಳಾರಿ ಜಿಲ್ಲೆಗೆ ಬರಲಿದೆ. ವಿಜಯನಗರ ಜಿಲ್ಲೆಗೆ ಶೇ 20 ರಷ್ಟು ಮಾತ್ರ ವಿನಿಯೋಗಿಸಬಹುದಾಗಿದೆ. ಹೀಗಾಗಿ, ಇಡೀ ದೇಶಕ್ಕೆ ಬಳ್ಳಾರಿ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿಸಬಹುದು. ಅಷ್ಟೊಂದು ಅನುದಾನ ಹರಿದು ಬರಲಿದೆ ಎಂದು ಸೋಮಶೇಖರ ರೆಡ್ಡಿ ಹೇಳಿದರು.
ನಾನಂತೂ ಉಸ್ತುವಾರಿ ಕೇಳಲ್ಲ: ಅಖಂಡ ಬಳ್ಳಾರಿ ಜಿಲ್ಲೆಯ ವಿಭಜನೆಗೆ ಕಾರಣರಾದ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು, ಉಸ್ತುವಾರಿ ಸಚಿವರಾಗಿ ಮುಂದುವರಿಯುವುದು ಬೇಡ. ಹೀಗಾಗಿ, ಸಚಿವ ಶ್ರೀರಾಮುಲು ಅವರು ಈ ಜಿಲ್ಲೆಯ ಉಸ್ತುವಾರಿ ವಹಿಸಿಕೊಂಡರೆ ಉತ್ತಮ. ಬೇರೆ ಯಾರಿಗಾದರೂ ಉಸ್ತುವಾರಿ ವಹಿಸಿದರೂ ಪರವಾಗಿಲ್ಲ. ಆದರೆ, ನಾನಂತೂ ಉಸ್ತುವಾರಿ ವಹಿಸುವಂತೆ ಕೇಳಲ್ಲ ಎಂದರು.