ಬಳ್ಳಾರಿ: ಮಹಾನಗರ ಪಾಲಿಕೆಯಿಂದ ನಿರ್ಮಿಸಿರುವ ಸ್ವಚ್ಛ ಬಳ್ಳಾರಿ, ಸ್ವಸ್ಥ ಬಳ್ಳಾರಿ ಎಂಬ ಕಿರುಚಿತ್ರವನ್ನು ನಗರ ಶಾಸಕ ಜಿ.ಸೋಮಶೇಖರರೆಡ್ಡಿ, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬಿಡುಗಡೆ ಮಾಡಿದರು.
ಬಳ್ಳಾರಿ ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಗರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದರಲ್ಲಿ ಘನತ್ಯಾಜ್ಯ ಸಂಗ್ರಹಣೆ, ಬಳ್ಳಾರಿ ಮಹಾ ನಗರದ ಸ್ವಚ್ಛತೆಗೆ ಕೈಗೊಂಡ ಕ್ರಮಗಳು, ನಿತ್ಯ ಉತ್ಪತ್ತಿಯಾಗುವ ಕಸದ ವಿಲೇವಾರಿ, ಪೌರಕಾರ್ಮಿಕರ ನಿತ್ಯದ ಜೀವನ, ಅವರು ನಿರ್ವಹಿಸುವ ಕಾರ್ಯದ ಕುರಿತು ಪರಿಚಯಿಸಿದೆ. ಈ ಕಿರುಚಿತ್ರ ಬಿಡುಗಡೆಗೊಳಿಸಿದ ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ, ಮಹಾನಗರ ಪಾಲಿಕೆ ಆಯುಕ್ತೆ ಪ್ರೀತಿ ಗೆಹ್ಲೋಟ್, ಪಾಲಿಕೆ ಆರೋಗ್ಯಾಧಿಕಾರಿ ಡಾ.ಹನುಮಂತಪ್ಪ ಇದ್ದರು.