ಬಳ್ಳಾರಿ : ಎಸ್‍ಸಿ, ಎಸ್‍ಟಿ ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಚಿವ ಶ್ರೀರಾಮುಲು ಸಿಹಿ ಸುದ್ದಿ ಕೊಡುತ್ತೇನೆ ಎಂದು ಎಲ್ಲರಿಗೂ ಸುಳ್ಳು ಹೇಳುತ್ತಾರೆ. ಅವರ ಸಿಹಿ ಸುದ್ದಿಯಿಂದ ಎಲ್ಲರಿಗೂ ಶುಗರ್ ಬಂದಿದೆ ಎಂದು ಬಳ್ಳಾರಿ ಗ್ರಾಮೀಣ ಶಾಸಕ ಬಿ ನಾಗೇಂದ್ರ ವ್ಯಂಗ್ಯವಾಡಿದ್ದಾರೆ.
ಬಳ್ಳಾರಿಯಲ್ಲಿ ಮಾಧ್ಯಮವದರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮೀಸಲಾತಿ ವಿಚಾರದಲ್ಲಿ ಎಸ್ಟಿ ಸಮುದಾಯಕ್ಕೆ ಮೋಸ ಮಾಡಿದೆ. ಸಚಿವ ಶ್ರೀರಾಮುಲು ಸಿಹಿ ಸುದ್ದಿ ಕೊಡುತ್ತೇನೆ ಎಂದು ಎಲ್ಲರಿಗೂ ಸುಳ್ಳು ಹೇಳುತ್ತಾರೆ. ಬಿಜೆಪಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಮೀಸಲಾತಿ ಹೆಚ್ಚಿಸುವುದಾಗಿ ಸಚಿವ ಶ್ರೀರಾಮುಲು ಭರವಸೆ ನೀಡಿದ್ದರು. ಆದರೆ 24 ಗಂಟೆ ಅಲ್ಲ. ಮೂರು ವರ್ಷ ಕಳೆದು ಹೋದವು. ಅವರಿಂದ ಈ ಕೆಲಸ ಸಾಧ್ಯವಾಗುವುದಿಲ್ಲ ಎಂದು ಟೀಕಿಸಿದರು.
ನಾಮಕಾವಸ್ಥೆಗೆ ಮಾತ್ರ ಮಂತ್ರಿಯಾಗಿದ್ದಾರೆ : ಇವರು ಪ್ರಭಾವಿಯಾಗಿದ್ದರೆ ಇಷ್ಟೊತ್ತಿಗೆ ಮೀಸಲಾತಿ ಹೆಚ್ಚಳ ಮಾಡಬೇಕಿತ್ತು. ಸಚಿವ ಶ್ರೀರಾಮುಲು ಅವರ ಕೈಯಲ್ಲೇನೂ ಇಲ್ಲ, ಅವರನ್ನು ದೂಷಿಸುವುದಿಲ್ಲ. ಶ್ರೀರಾಮುಲು ಅವರಿಗೆ ಸಿಎಂ ಸಹಕಾರ ನೀಡುತ್ತಿಲ್ಲ. ನಾಮಕಾವಸ್ಥೆಗೆ ಮಾತ್ರ ಮಂತ್ರಿಯಾಗಿದ್ದಾರೆ. ಇನ್ನು, ಮಂತ್ರಿಗಳಾದಿಯಾಗಿ ಶಾಸಕರು ಬಾಯಿ ತೆರೆದರೆ ಕೇಸು ಹಾಕುವಂತಹ ಪರಿಸ್ಥಿತಿ ಇದೆ. ಹೀಗಾಗಿ ವಾಲ್ಮೀಕಿ ಸಮಾಜದ ಎಲ್ಲ ಪಕ್ಷಗಳ ಶಾಸಕರು ನಮಗೆ ಬೆಂಬಲ ಕೊಡಿ ಎಂದು ನಾವು ಮನವಿ ಮಾಡುತ್ತೇವೆ ಎಂದು ಹೇಳಿದರು.
ಶ್ರೀರಾಮುಲು ಅವರನ್ನು ಕಾಂಗ್ರೆಸ್ ಗೆ ಆಹ್ವಾನಿಸಿದ ನಾಗೇಂದ್ರ : 24 ತಾಸಿನಲ್ಲಿ ಮೀಸಲಾತಿ ಹೆಚ್ಚಿಸುವುದಾಗಿ ಹೇಳಿದ್ದರು. ಈಗ ಎಷ್ಟು ದಿನಗಳಾದವು?. ಜಿಲ್ಲೆಗೆ, ವಾಲ್ಮೀಕಿ ಸಮಾಜಕ್ಕೆ ಶ್ರೀರಾಮುಲು ದೊಡ್ಡ ನಾಯಕರೆಂದು ಒಪ್ಪುತ್ತೇವೆ. ಶೇ.7.6 ಮೀಸಲಾತಿ ಕೊಡಿಸಿದರೆ ಒಪ್ಪುತ್ತೇವೆ. ಶಕ್ತಿ ಇಲ್ಲವೆಂದಾದರೆ ಆ ಪಕ್ಷವನ್ನು ಬಿಟ್ಟುಬಿಡಬೇಕು. ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಕೊಡಿಸಲಾಗದ ಶ್ರೀರಾಮುಲು ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಬರುವಂತೆ ಆಹ್ವಾನ ನೀಡಿದರು. ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಬಂದರೆ ಕರೆದುಕೊಳ್ಳುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ : ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮಕ್ಕೆ ಬಹಿಷ್ಕಾರ ನಿರ್ಧಾರ : ಸತೀಶ ಜಾರಕಿಹೊಳಿ