ಬಳ್ಳಾರಿ: ಜಿಲ್ಲೆಯ ಹರಪನಹಳ್ಳಿ ತಾಲೂಕಿನ ತೆಲಿಗಿ ಗ್ರಾಮದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕ ಜಿ.ಕರುಣಾಕರ ರೆಡ್ಡಿ ಅವರು ದಿಢೀರ್ ಭೇಟಿ ನೀಡಿ ಆರೋಗ್ಯ ಕೇಂದ್ರಲ್ಲಿನ ಅವ್ಯವಸ್ಥೆಯನ್ನು ಕಂಡು ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಆರೋಗ್ಯ ಕೇಂದ್ರಕ್ಕೆ ವೈದ್ಯರು ಮತ್ತು ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಲ್ಲ ಎಂಬ ದೂರಿನ ಹಿನ್ನಲೆಯಲ್ಲಿ, ಹಾಜರಾತಿ ಪುಸ್ತಕ ಪರಿಶೀಲಿಸಿ, ಸಹಿ ಮಾಡದ ಸಿಬ್ಬಂದಿಯ ಮಾಹಿತಿ ಪಡೆದುಕೊಂಡರು.
ಇನ್ನು, ಆಸ್ಪತ್ರೆಯಲ್ಲಿ ಹಾವು, ನಾಯಿ ಕಡಿತಕ್ಕೆ ನೀಡೋ ಚುಚ್ಚುಮದ್ದು ಏಕೆ ಇಟ್ಟಿಲ್ಲ ಎಂದು ಪ್ರಶ್ನಿಸಿದಾಗ, ದಾಸ್ತಾನು ಇಲ್ಲ ಎಂದು ವೈದ್ಯರು ಉತ್ತರಿಸುತ್ತಿದ್ದಂತೆ ಕೆಂಡಾಮಂಡಲವಾದ ಶಾಸಕ ಇಲ್ಲಿ ರೈತರು,ಕೂಲಿಕಾರರು ಹೆಚ್ಚಾಗಿ ಇದ್ದಾರೆ. ಹೀಗಾಗಿ ಸಬೂಬು ಹೇಳದೇ ತಕ್ಷಣವೇ ಚುಚ್ಚುಮದ್ದು ದಾಸ್ತಾನು ಮಾಡಿಕೊಳ್ಳಬೇಕು ಎಂದು ಸೂಚಸಿದ್ರು.
ರಾತ್ರಿ ಪಾಳೆಯದಲ್ಲಿ ವೈದ್ಯರು,ಸಿಬ್ಬಂದಿ ಇರುವುದಿಲ್ಲ ಎಂಬ ದೂರು ಕೇಳಿ ಬಂದಿದ್ದು,ರಾತ್ರಿ ತಕ್ಷಣ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಬೇಕು. ಅಲ್ಲದೇ, ಆಯುಷ್ಮಾನ್ ಭಾರತ ಕಾರ್ಡ್ ಸೇರಿ ಆಸ್ಪತ್ರೆಯಲ್ಲಿರುವ ಅವ್ಯವಸ್ಥೆಗಳನ್ನ ಸರಿಪಡಿಸದಿದ್ದರೆ,ಅಮಾನತು ಮಾಡಲು ಶಿಫಾರಸು ಮಾಡೋದಾಗಿ ವೈದ್ಯರಿಗೆ ಎಚ್ಚರಿಕೆ ನೀಡಿದ್ರು.