ಬಳ್ಳಾರಿ: ನಾನು ಅತೃಪ್ತ ಶಾಸಕರೊಂದಿಗೆ ಗುರುತಿಸಿಕೊಂಡಿಲ್ಲ. ನಾನು ನನ್ನ ಕ್ಷೇತ್ರದಲ್ಲೇ ಇರುವೆ. ಮಾಧ್ಯಮಗಳು ನನ್ನ ಹೆಸರನ್ನು ಅತೃಪ್ತರೊಂದಿಗೆ ಥಳಕು ಹಾಕಿ ಸುಳ್ಳು ಸುದ್ದಿ ಬಿತ್ತರಿಸುತ್ತಿವೆ ಎಂದು ಕಂಪ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್ ಕಿಡಿಕಾರಿದ್ದಾರೆ.
ನಗರದ ಮೋಕಾ ರಸ್ತೆಯಲ್ಲಿರುವ ರಾಘವೇಂದ್ರ ಎಂಟರ್ ಪ್ರೈಸಸ್ ಕಚೇರಿಯಲ್ಲಿಂದು ಮಾಜಿ ಶಾಸಕ ಎನ್.ಸೂರ್ಯನಾರಾಯಣ ರೆಡ್ಡಿಯವರನ್ನು ಭೇಟಿ ಮಾಡಿದ ಬಳಿಕ, ತಮ್ಮ ಆಪ್ತರ ಬಳಿ ಮಾತನಾಡಿದ ಈ ವಿಡಿಯೋ ತುಣುಕೊಂದನ್ನು ಬಿಡುಗಡೆ ಮಾಡಿದ್ದಾರೆ. ನಾನು ಎಲ್ಲಿಗೂ ಹೋಗಿಲ್ಲ. ಕಳೆದೊಂದು ತಿಂಗಳಿಂದ ನಾನು ಕ್ಷೇತ್ರ ವ್ಯಾಪ್ತಿಯ ಕುರುಗೋಡು ಮತ್ತು ಕಂಪ್ಲಿ ಭಾಗದಲ್ಲಿಯೇ ಪ್ರವಾಸ ಕೈಗೊಂಡಿರುವೆ. ನಾನು ಯಾರೊಂದಿಗೂ ದೂರವಾಣಿ ಸಂಪರ್ಕ ಹೊಂದಿಲ್ಲ. ಬಿಜೆಪಿ ಜೊತೆಗೆ ಶಾಸಕ ಗಣೇಶ್ ಸಖ್ಯ ಬೆಳೆಸಿದ್ದಾರೆ ಎಂಬುದು ಮಾಧ್ಯಮಗಳ ಸೃಷ್ಠಿಯಷ್ಟೇ. ಅದೆಲ್ಲ ಸುಳ್ಳು ಸುದ್ದಿ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ನಿಷ್ಠನಾಗಿದ್ದೇನೆ. ಪಕ್ಷದ ಹೈಕಮಾಂಡ್ ತೆಗೆದುಕೊಳ್ಳವ ತೀರ್ಮಾನಕ್ಕೆ ನಾನು ಬದ್ಧ. ನಾಳೆ ನಡೆಯಲಿರುವ ಸಿಎಲ್ಪಿ ಸಭೆಗೆ ಹಾಜರಾಗುವಂತೆ ಕರೆ ಬಂದಿದೆ. ಬೆಂಗಳೂರಿನಲ್ಲಿ ನಡೆಯಲಿರುವ ಸಿಎಲ್ಪಿ ಸಭೆಗೆ ಹಾಜರಾಗುತ್ತೇನೆ. ಎಂಥಹದ್ದೇ ಸಂದರ್ಭ ಎದುರಾದ್ರೂ ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ. ಮಾಧ್ಯಮಗಳ ಉಹಾಪೋಹಗಳಿಗೆ ನನ್ನ ಕ್ಷೇತ್ರದ ಜನ ಕಿವಿಗೊಡಬಾರದು. ಕಳೆದೊಂದು ತಿಂಗಳಿನಿಂದಲೂ ಕ್ಷೇತ್ರದಲ್ಲಿ ವಾರ್ಡ್ ವೈಸ್ ಸಭೆಗಳನ್ನ ನಡೆಸುತ್ತಿದ್ದೇನೆ. ನಾನು ಗೆದ್ದಾಗಿನಿಂದಲೂ ಪಕ್ಷ ಬಿಡುತ್ತೇನೆ ಅಂತಾ ಕೆಲ ಮಾಧ್ಯಮಗಳು ಅಪಪ್ರಚಾರ ನಡೆಸುತ್ತಿವೆ ಎಂದು ದೂರಿದ್ದಾರೆ.