ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಸ್ಥಾಪಿಸಿರುವ ಕೆಆರ್‌ಪಿಪಿ ಪಕ್ಷದಿಂದ ಜನಾರ್ದನ ರೆಡ್ಡಿ ಅವರ ಪತ್ನಿ ಗಾಲಿ ಲಕ್ಷ್ಮೀ ಅರುಣಾ ಅವರು ಬಳ್ಳಾರಿ ನಗರ ಕ್ಷೇತ್ರಕ್ಕೆ ಅಭ್ಯರ್ಥಿ ಎಂದು ಘೋಷಣೆ ಆಗಿರುವ ಹಿನ್ನೆಲೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಬಳ್ಳಾರಿ ನಗರ ಶಾಸಕ ಜಿ ಸೋಮಶೇಖರ್ ರೆಡ್ಡಿ, ಚುನಾವಣೆಯಲ್ಲಿ ಯಾರು ಸ್ಪರ್ಧೆ ಮಾಡಿದರೂ ಕೂಡ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ: ಬಳ್ಳಾರಿ ನಗರ ಕ್ಷೇತ್ರದಿಂದ ತಮ್ಮ ಸ್ಪರ್ಧೆ ನೂರಕ್ಕೆ ನೂರರಷ್ಟು ಖಚಿತ ಎಂದು ಹೇಳಿದ ಅವರು, ಸ್ಪರ್ಧೆಯಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಬಿಜೆಪಿಯಿಂದ ಟಿಕೆಟ್ ಸಿಗದಿದ್ದರೆ ಪಕ್ಷೇತರನಾಗಿ ಸ್ಪರ್ಧೆ ಮಾಡುವೆ. ಪಕ್ಷೇತರನಾಗಿ ಗೆದ್ದ ನಂತರ ಮತ್ತೆ ಬಿಜೆಪಿ ಸೇರುತ್ತೇನೆ ಎಂದು ಹೇಳಿದರು.
ಕೆಲವರು ಹಣಕ್ಕಾಗಿ ಅವರ ಪಕ್ಷದ ಕಡೆ ಹೋಗುತ್ತಿದ್ದಾರೆ: ಜನಾರ್ದನ ರೆಡ್ಡಿಗೆ ಪಕ್ಷ ಕಟ್ಟುವುದು ಬೇಡ ಎಂದು ಸಲಹೆ ನೀಡಿದ್ದೆವು. ನಾನು ಶ್ರೀರಾಮುಲು, ಕರುಣಾಕರ ರೆಡ್ಡಿ ಸಲಹೆ ನೀಡಿದ್ದೇವೆ. ಆದರೆ ಅದನ್ನು ಮೀರಿ ಹೊಸ ಪಕ್ಷ ಕಟ್ಟಿದ್ದಾರೆ. ನಾನು ಪಕ್ಷಕ್ಕೆ ಸೇರಿಲ್ಲ ಎಂಬ ಸಿಟ್ಟಿನಿಂದ ನನ್ನ ವಿರುದ್ಧ ಸ್ಪರ್ಧೆಗೆ ಘೋಷಣೆ ಮಾಡಿದ್ದಾರೆ. ಕೆಲವರು ಹಣಕ್ಕಾಗಿ ಅವರ ಪಕ್ಷದ ಕಡೆ ಹೋಗುತ್ತಿದ್ದಾರೆ ಎಂದು ಸೋಮಶೇಖರ್ ರೆಡ್ಡಿ ಹೇಳಿದರು. ಆದರೆ ನಿಷ್ಠಾವಂತ ಕಾರ್ಯಕರ್ತರು ನನ್ನ ಜೊತೆ ಇದ್ದಾರೆ. ಸ್ಪರ್ಧೆಯಿಂದ ಹಿಂದೆ ಸರಿಯುವುದು ನನ್ನ ಜಾಯಮಾನದಲ್ಲೇ ಇಲ್ಲ ಎಂದರು.
ಇದನ್ನೂ ಓದಿ : ನಿಯೋಜಿತ ಅಭ್ಯರ್ಥಿಗಳು ಪಾದಯಾತ್ರೆ, ಗ್ರಾಮ ವಾಸ್ತವ್ಯ ಮಾಡುವಂತೆ ಹೆಚ್.ಡಿ.ದೇವೇಗೌಡ ಸೂಚನೆ
ಆತನಿಗಾಗಿ 63 ದಿನಗಳ ಕಾಲ ಜೈಲಿಗೆ ಹೋಗಿ ಬಂದೆ: ಇದೇ ವೇಳೆ ಹಳೆಯ ಸಂದರ್ಭಗಳನ್ನು ನೆನೆದು ಭಾವುಕರಾದ ಸೋಮಶೇಖರ ರೆಡ್ಡಿ, ಲಕ್ಷ್ಮೀ ಅರುಣಾ ಸ್ಪರ್ಧೆ ಮಾಡೋದು ಒಳ್ಳೆಯದು, ಸೊಸೆ ಭಾವ ಮಧ್ಯೆ ಸ್ಪರ್ಧೆ ಕುತೂಹಲಕಾರಿಯಾಗಿ ಇರುತ್ತದೆ. ತಮ್ಮ ಜನಾರ್ದನ ರೆಡ್ಡಿ ಜೈಲಲ್ಲಿದ್ದಾಗ ಅವನಿಗಾಗಿ 2018 ರಲ್ಲಿ ನಾನು ಚುನಾವಣೆಗೆ ನಿಲ್ಲಲಿಲ್ಲ. ಆತನಿಗಾಗಿ 63 ದಿನಗಳ ಕಾಲ ಜೈಲಿಗೆ ಹೋಗಿ ಬಂದೆ. ಆ ಸಂದರ್ಭ ಸೊಸೆ ಲಕ್ಷ್ಮೀ ಅರುಣಾ ಭಾವ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ ಎಂದು ಹೇಳಿದ್ದರು. ತಮ್ಮನ ಮಗಳು ಬ್ರಹ್ಮಣಿ ಕೂಡ ನಿಮ್ಮ ಋಣ ತೀರಿಸಲು ಸಾಧ್ಯವಿಲ್ಲ ಚಿಕ್ಕಪ್ಪ ಎಂದಿದ್ದರು ಅನ್ನೋದನ್ನು ಇದೇ ಸಂದರ್ಭದಲ್ಲಿ ಹೇಳಿದರು.
ಇದನ್ನೂ ಓದಿ : ಜಾರಕಿಹೊಳಿ ಸಿಡಿ ವಿಚಾರಕ್ಕೆ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ನೀಡಲಿ: ಈಶ್ವರಪ್ಪ
ಬಳ್ಳಾರಿ ನಗರದ ಜನತೆ ನನ್ನ ಕೈ ಬಿಡಲ್ಲ: ನನ್ನ ವಿರುದ್ಧ ಅಭ್ಯರ್ಥಿ ಹಾಕಿದ್ದಕ್ಕೆ ನಗರದ ಪ್ರತಿಷ್ಠಿತ ಮನೆತನದ ವ್ಯಕ್ತಿಗಳು ಬೇಜಾರಾಗಿದ್ದಾರೆ. ಅಧಿಕಾರ ಇದ್ದಾಗ ದುಡಿದುಕೊಂಡವರು ಅವರು ಇಂತಹ ಕೆಲಸ ಮಾಡಬಾರದಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ. ಇಷ್ಟು ದಿನ ಎಲ್ಲಿದ್ದರು? ಕುಳಿತುಕೊಂಡಿದ್ದರು? ಇದೀಗ ಹೊರ ಬಂದಿದ್ದಾರೆ. ಮುನ್ಸಿಪಲ್ ಅಧ್ಯಕ್ಷ ಇದ್ದಾಗಿನಿಂದ ಇಲ್ಲಿಯವರೆಗೆ ಜನರ ಜೊತೆ ಇದ್ದೇನೆ. ಬಳ್ಳಾರಿ ನಗರದ ಜನತೆ ನನ್ನ ಕೈಬಿಡಲ್ಲ ಎಂದು ಸೋಮಶೇಖರ್ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ಸಿದ್ದರಾಮಯ್ಯನವರಿಗೆ ರಾಜಕೀಯವಾಗಿ ಎಲ್ಲಿ ಉತ್ತರ ಕೊಡಬೇಕೋ ಅಲ್ಲಿ ಕೊಡುತ್ತೇನೆ: ಸಿಎಂ