ಬಳ್ಳಾರಿ: ಶಾಸಕ ಆನಂದ ಸಿಂಗ್ ಜಿಲ್ಲೆಯ ಹೊಸಪೇಟೆ ಪಟ್ಟಣ ಠಾಣೆಗೆ ನಿನ್ನೆ ರಾತ್ರಿ ಬಂದು ನಾನು ಕಾಣೆಯಾಗಿಲ್ಲ, ತಂದೆಯ ಚಿಕಿತ್ಸೆಗಾಗಿ ಬೆಂಗಳೂರಿಗೆ ತೆರಳಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಜುಲೈ 17ರಂದು ಕಾಂಗ್ರೆಸ್ ಮುಖಂಡರು ಸೇರಿದಂತೆ ಕೆಲವರು ಹೊಸಪೇಟೆ ಪಟ್ಟಣ ಠಾಣೆಗೆ ಬಂದು ಶಾಸಕ ಆನಂದಸಿಂಗ್ ಅವರು ಕಾಣೆಯಾಗಿದ್ದಾರೆಂದು ದೂರನ್ನು ನೀಡಿದ್ದರು. ಅದು ಮಾಧ್ಯಮದ ಮೂಲಕ ಆನಂದಸಿಂಗ್ ಗಮನಕ್ಕೆ ಬಂದಿದೆ.
ನಂತರ, ಆನಂದ್ಸಿಂಗ್ ತನ್ನ ತಂದೆ ಬಿ.ಎಸ್.ಪೃಥ್ವಿರಾಜ ಸಿಂಗ್ ಅವರಿಗೆ ಚಿಕಿತ್ಸೆ ಕೊಡಿಸಲು ಬೆಂಗಳೂರಿಗೆ ತೆರಳಿದ್ದೇನೆಂದು ಪೊಲೀಸ್ ಠಾಣೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಜು.13ರಂದು ಸಂಜೆ ಪೃಥ್ವಿರಾಜಸಿಂಗ್ ಅವರು ಮಳೆಯಲ್ಲಿ ಕಾಲುಜಾರಿ ಬಿದ್ದಿದ್ದರು. ಅವರಿಗೆ ಚಿಕಿತ್ಸೆ ಕೊಡಿಸಲು ನಗರದ ಡಾ.ಬಿ.ಆರ್.ಆಚಾರ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಜು.15 ರಂದು ಬೆಂಗಳೂರಿಗೆ ಕರೆದುಕೊಂಡು ಹೋಗಿ ವಿಕ್ರಮ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಜು.17 ರಂದು ಆಸ್ಪತ್ರೆಯಿಂದ ಡಿಸ್‍ಜಾರ್ಜ್ ಮಾಡಿದ್ದು, 18 ಮತ್ತು 19 ರಂದು ಆರೋಗ್ಯ ತಪಾಸಣೆಗಾಗಿ ಬೆಂಗಳೂರಿಗೆ ಕರೆದುಕೊಂಡು ಹೋಗಲಾಗಿತ್ತು. ಸದ್ಯ ಠಾಣೆಗೆ ಬಂದು ಆನಂದ ಸಿಂಗ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.