ಬಳ್ಳಾರಿ: ದೇಶದಾದ್ಯಂತ ಲಾಕ್ಡೌನ್ ಜಾರಿಯಾಗಿರುವುದರಿಂದ ಕೂಲಿ ಕಾರ್ಮಿಕರಿಗೆ ತೀವ್ರ ಸಮಸ್ಯೆಯಾಗಿದೆ. ಈ ಹಿನ್ನೆಲೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ತಮ್ಮ ಸ್ವಂತ ಖರ್ಚಿನಲ್ಲಿ ಬಡವರಿಗೆ ಆಹಾರ ಪದಾರ್ಥಗಳ ಕಿಟ್ ವಿತರಿಸುವ ಕಾರ್ಯ ಮಾಡುತ್ತಿದ್ದಾರೆ.
ಈ ವೇಳೆ ಇಲ್ಲಿನ ಹೊಸಪೇಟೆ ಬಳಿ ಆಹಾರ ಧಾನ್ಯ ಹಂಚುತ್ತಿದ್ದ ವೇಳೆ ವೃದ್ಧೆಯೊಬ್ಬರು ಊರುಗೋಲು ಹಿಡಿದು ಕಿಟ್ ಪಡೆಯಲು ನಿಂತಿದ್ದರು. ಇದನ್ನು ಕಂಡ ಆನಂದ್ ಸಿಂಗ್, ತಾವಾಗಿಯೇ ಅವರ ಊರುಗೋಲು ಹಿಡಿದು ಕರೆ ತಂದರು. ಈ ನಡುವೆ ಆಹಾರ ಪದಾರ್ಥಗಳ ಕಿಟ್ ವಿತರಿಸುವವರಿಗೆ ಏನಪ್ಪಾ, ಈ ಅಜ್ಜಿಗೆ ಕಿಟ್ ನೀಡುತ್ತಿರೋ ಇಲ್ಲವೋ ಎಂದು ಕೇಳಿ ಕಿಟ್ ವಿತರಿಸಿ ಗಮನ ಸೆಳೆದರು.
ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್, ಬಡವರಿಗೆ ಮತ್ತು ಕೂಲಿ ಕಾರ್ಮಿಕರ ನೆರವಿಗಾಗಿ ಹೊಸಪೇಟೆ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ತಮ್ಮ ವೈಯಕ್ತಿಕ ಖರ್ಚಿನಲ್ಲಿ ಉಚಿತ ಪಡಿತರ ಕಿಟ್ಗಳನ್ನು ವಿತರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಮೇ. 3ರವರೆಗೂ ಲಾಕ್ಡೌನ್ ಆದೇಶ ಹೊರಡಿಸುವುದರ ಜೊತೆಗೆ ಮನೆಯಲ್ಲೇ ಇರುವುದರ ಮೂಲಕ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಿದೆ.
ಆದ್ದರಿಂದ ಆನಂದ್ ಸಿಂಗ್ ಹೊಸಪೇಟೆ ತಾಲೂಕು ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪಡಿತರ ಚೀಟಿ ಹೊಂದಿದ ಪ್ರತಿ ಕುಟುಂಬಕ್ಕೆ 'ಆಹಾರಾನಂದ' ಹೆಸರಿನಲ್ಲಿ ಜೋಳ 6 ಕೆಜಿ, ತೊಗರಿಬೇಳೆ 3 ಕೆಜಿ, ಅಡುಗೆ ಎಣ್ಣೆ 2 ಲೀಟರ್, ಖಾರದ ಪುಡಿ 400 ಗ್ರಾಂ, ಹಾಲಿನ ಪೌಡರ್ 150 ಗ್ರಾಂ, ಅರಿಷಿಣ, ಸಾಸಿವೆ ಹಾಗೂ ಜೀರಿಗೆ 100 ಗ್ರಾಂ, ಬೆಳ್ಳುಳ್ಳಿ 500 ಗ್ರಾಂ, ಉಪ್ಪು 1 ಕೆಜಿ ಹೊಂದಿದ ಪಡಿತರ ಕಿಟ್ಗಳ ವಿತರಣೆ ಮಾಡುತ್ತಿದ್ದಾರೆ.