ಬಳ್ಳಾರಿ: ಶನಿವಾರ ಮುನಿಸಿಪಲ್ ಕಾಲೇಜಿನ ಮೈದಾನದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆಯ ಬಹಿರಂಗ ಸಮಾವೇಶ ನಡೆದಿತ್ತು. ಸಮಾವೇಶದ ನಂತರ ಮೈದಾನದಲ್ಲಿ ಕಸದ ರಾಶಿ ಬಿದ್ದಿತ್ತು. ಅದನ್ನು ಭಾನುವಾರ ಮಧ್ಯಾಹ್ನ ಸಚಿವ ಶ್ರೀರಾಮುಲು, ಬಳ್ಳಾರಿ ನಗರ ಶಾಸಕ ಸೋಮಶೇಖರರೆಡ್ಡಿ, ಮಾಜಿ ಸಂಸದೆ ಜೆ.ಶಾಂತಾ ಸೇರಿದಂತೆ ಹಲವು ನಾಯಕರು ಸ್ವಚ್ಛಗೊಳಿಸಿದರು.
ಬೆಳಗ್ಗೆ ಮೈದಾನಕ್ಕೆ ಬಂದಿದ್ದ ಜನ ಅಲ್ಲಿನ ಅಸ್ವಚ್ಛತೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿತ್ತು. ಸಂಜೆಯಾದರೂ ಕಾಂಗ್ರೆಸ್ ಮೈದಾನವನ್ನು ಸ್ವಚ್ಛ ಮಾಡದಿದ್ದಾಗ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು, ನಗರ ಶಾಸಕ ಸೋಮಶೇಖರ್ ರೆಡ್ಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಗೋನಾಳ್ ಮುರಹರಗೌಡ ಮೊದಲಾದವರು ಟ್ರ್ಯಾಕ್ಟರ್ ತರಿಸಿ ಮೈದಾನದಲ್ಲಿದ್ದ ಪ್ಲಾಸ್ಟಿಕ್ ಕವರ್ ಸೇರಿದಂತೆ ಕಸವನ್ನು ಸಂಗ್ರಹಿಸಿ ಸ್ವಚ್ಛಗೊಳಿಸಿದರು.
ಇದನ್ನೂ ಓದಿ: ಬಿಜೆಪಿ ಮತ್ತು ಆರ್ಎಸ್ಎಸ್ ವಿಚಾರಧಾರೆ ದೇಶ ವಿಭಜನೆ ಮಾಡುತ್ತಿದೆ: ರಾಹುಲ್ ಗಾಂಧಿ
ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು 'ಕಾಂಗ್ರೆಸ್‌ನವರು ಹೊಲಸು ಮಾಡಿ, ರಾಡಿ ಮಾಡಿ ಕುಂತಾರ. ಸೋಮವಾರ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ತೊಂದರೆ ಆಗಬಾರದು. ರಾಜಕಾರಣಿಗಳ ಬಗ್ಗೆ ಕೆಟ್ಟ ಅಭಿಪ್ರಾಯ ಬರಬಾರದೆಂದು ಮತ್ತು ಪ್ರಧಾನಿ ಮೋದಿಯವರ ಕರೆಯಾಗಿರುವ ಸ್ವಚ್ಛ ಭಾರತ ಅಭಿಯಾನ ಹಿನ್ನೆಲೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಂದು ಮೈದಾನವನ್ನು ಸ್ವಚ್ಛ ಮಾಡಿದ್ದೇವೆ. ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕಿತ್ತು. ಆದರೆ ನಾವು ಮಾಡಿದ್ದೇವೆ' ಎಂದರು.
ಸಚಿವ ಶ್ರೀರಾಮುಲು ಪೊರಕೆ ಹಿಡಿದು ಮೈದಾನವನ್ನು ಗುಡಿಸಿ, ಕಸವನ್ನು ಪಾಲಿಕೆಯ ವಾಹನಕ್ಕೆ ತುಂಬಿದರು. ಬುಡಾ ಅಧ್ಯಕ್ಷ ಮಾರುತಿ ಪ್ರಸಾದ್, ಬಿಜೆಪಿ ಜಿಲ್ಲಾಧ್ಯಕ್ಷ ಮುರಾರಿಗೌಡ, ಗುರುಲಿಂಗನಗೌಡ ಸೇರಿದಂತೆ ಹಲವರು ಹಾಜರಿದ್ದರು.
ಇದನ್ನೂ ಓದಿ: ಬಳ್ಳಾರಿ ಅಭಿವೃದ್ಧಿ ಬಗ್ಗೆ ಲೆಕ್ಕಾಚಾರ ಮಾಡೋಣ ಬನ್ನಿ: ಸಿದ್ದರಾಮಯ್ಯಗೆ ಶ್ರೀರಾಮುಲು ತಿರುಗೇಟು