ಬಳ್ಳಾರಿ: ರಾಸಲೀಲೆ ಪ್ರಕರಣದ ತನಿಖೆ ರಾಜ್ಯದ ಎರಡು ವಿಧಾನಸಭೆ ಹಾಗೂ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಯಾವುದೇ ವ್ಯತಿರಿಕ್ತ ಪರಿಣಾಮ ಬೀರಲ್ಲ ಎಂದು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅಭಿಪ್ರಾಯಪಟ್ಟಿದ್ದಾರೆ.
ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆ ನಿಮಿತ್ತ ಈ ದಿನ ನಾನಾ ವಾರ್ಡ್ಗಳಲ್ಲಿ ಕೈಗೊಂಡಿದ್ದ ಪ್ರಚಾರದ ವೇಳೆಯಲ್ಲಿ ಮಾಧ್ಯಮಗಳಿಗೆ ಸಚಿವ ಶ್ರೀರಾಮುಲು ಈ ವಿಷಯ ತಿಳಿಸಿದ್ದಾರೆ. ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ರಾಸಲೀಲೆ ಪ್ರಕರಣದ ತನಿಖೆ ವಿಚಾರವಂತೂ ಈ ಬೈ ಎಲೆಕ್ಷನ್ ನಲ್ಲಿ ಪರಿಣಾಮ ಬೀರಲ್ಲ. ಅದೆಲ್ಲಾ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರ ಹಗಲು ಗನಸು ಎಂದು ಸಚಿವ ಶ್ರೀರಾಮುಲು ವಾಗ್ದಾಳಿ ನಡೆಸಿದ್ದಾರೆ.
ಇಡೀ ದೇಶದಲ್ಲೇ ಕಾಂಗ್ರೆಸ್ ಧೂಳಿಪಟ ಆಗಿದೆ. ರಾಜ್ಯದಲ್ಲಿ ಎಲ್ಲೆಲ್ಲಿ ಹೋಗ್ತಾರೋ ಅಲ್ಲೆಲ್ಲಾ ಕಾಂಗ್ರೆಸ್ ಸೋತಿದೆ. ಈ ಉಪ ಚುನಾವಣೆಯಲ್ಲಿ ಯಾವ ಜೋಡೆತ್ತು ಕೆಲಸ ಮಾಡಲ್ಲ ಎಂದು ಸಿದ್ದು - ಡಿಕೆಶಿಗೆ ರಾಮುಲು ಟಾಂಗ್ ನೀಡಿದ್ದಾರೆ. ಮಸ್ಕಿ, ಬಸವ ಕಲ್ಯಾಣ, ಬೆಳಗಾವಿಯಲ್ಲಿ ಬಿಜೆಪಿ ಗೆಲುವು ನಿಶ್ಚಿತ.
ವಿಜಯೇಂದ್ರ ಬಂದರೆ ಹಣ ಎಂಬ ಸಿದ್ದು ಹೇಳಿಕೆಗೆ ಸಚಿವ ಶ್ರೀ ರಾಮುಲು ತಿರುಗೇಟು ನೀಡಿದ್ದಾರೆ. ಸುಳ್ಳು ಅಂದ್ರೆ ಕಾಂಗ್ರೆಸ್, ಸತ್ಯ ಅಂದ್ರೆ ಬಿಜೆಪಿ ಜನ ಸತ್ಯವನ್ನ ಆಯ್ಕೆ ಮಾಡ್ತಾರೆ. ವಿಜಯೇಂದ್ರ ಅವರದು ತಪ್ಪೇನಿದೆ ರೀ? ಅವರ ತಂದೆ ರಾಜಕಾರಣದಲ್ಲಿರೋದ್ರಿಂದ ತಂದೆಗೆ ಮಗ ಸಹಾಯ ಮಾಡೋದು ತಪ್ಪಾ? ಈ ಆರೋಪ ಯಾರಿಗೂ ಶೋಭೆ ತರೋಲ್ಲ. ಶಿರಾ, ರಾಜರಾಜೇಶ್ವರಿಯಲ್ಲಿ ವಿಜಯೇಂದ್ರ ಗೆದ್ದರು. ಹೀಗಾಗಿ ದಿಕ್ಕು ತಪ್ಪಿಸಲು ಈ ರೀತಿ ಆರೋಪ ಮಾಡ್ತಾ ಇದ್ದಾರೆ. ಸಿಎಂ ಮಗ ಎನ್ನುವ ಕಾರಣಕ್ಕೆ ನಮಗಿಂತ ಜಾಸ್ತಿ ಮರ್ಯಾದೆ ಸಿಗಬಹುದು. ಅದ್ರಲ್ಲಿ ತಪ್ಪೇನು? ಸಿಎಂ ಮಗ ಅಂದ್ರೆ ಅಷ್ಟಾದರೂ ಡಿಗ್ನಿಟಿ ಇರಬೇಕಲ್ವಾ ಎಂದ್ರು ಸಚಿವ ಶ್ರೀ ರಾಮುಲು.
ಉಪ ಚುನಾವಣೆ ಕ್ಷೇತ್ರಗಳಲ್ಲಿ ಎದ್ದಿರುವ ಬಂಡಾಯ ಶಮನ ಮಾಡುವೆ. ಬಂಡಾಯ ಅಭ್ಯರ್ಥಿ ಕಣದಿಂದ ಹಿಂದೆ ಸರಿಯುವಂತೆ ಮಾಡ್ತೇನೆ. ಕೂಬಾ ಸೇರಿದಂತೆ ಬಂಡಾಯ ಅಭ್ಯರ್ಥಿಗಳ ಜೊತೆ ಸಂಧಾನ ಮಾಡ್ತೇನೆ. ಈ ಕುರಿತು ಕಟೀಲ್ ಜೊತೆಗೆ ಮಾತನಾಡುವೆ ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
ರಾಸಲೀಲೆ ಪ್ರಕರಣ ಕುರಿತು ಪ್ರತಿಕ್ರಿಯೆ:
ಎಸ್ಐಟಿ ತನ್ನ ಕೆಲಸ ಮಾಡ್ತಿದೆ. ಯಾವ ಪ್ರಭಾವ ಇಲ್ಲಿ ಬೀರಿಲ್ಲ. ತನಿಖೆ ಬಳಿಕ ಯಾರದು ಸುಳ್ಳು ಯಾರದು ಸತ್ಯ ಎಂದು ಗೊತ್ತಾಗಲಿದೆ. ಉಪಚುನಾವಣೆ ಮೇಲೆ ರಾಸಲೀಲೆ ಪ್ರಕರಣ ಪರಿಣಾಮ ಬೀರಲ್ಲ. ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುತ್ತೆ ಎಂದ್ರು ಸಚಿವ ಶ್ರೀರಾಮುಲು.