ಬಳ್ಳಾರಿ : ಬೊಮ್ಮಾಯಿ ಸರ್ಕಾರದ ಬಗ್ಗೆ ಸಿದ್ದರಾಮಯ್ಯ ಲಘುವಾಗಿ ಮಾತನಾಡ್ತಿದ್ದಾರೆ. ಸಿದ್ದರಾಮಯ್ಯ ಅಂದರೆ ಸಮಾಜವಾದಿ ಎನ್ನುವ ಮಾತಿತ್ತು. ಆದರೆ, ಈಗ ಕುರ್ಚಿಗಾಗಿ ಸಿದ್ದರಾಮಯ್ಯ ಎನ್ನುವ ಹಾಗೆ ಆಗಿದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದರು.
ನಗರದಲ್ಲಿಂದು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಕುರ್ಚಿಗಾಗಿ ಹಗಲುಗನಸು ಕಾಣ್ತಿದ್ದಾರೆ. ಹೀಗಾಗಿ, ಏನೇನೋ ಮಾತನಾಡುತ್ತಿದ್ದಾರೆ. ಅಧಿಕಾರದ ಹಗಲುಗನಸಿನಿಂದ ಕಲಾಪ ವ್ಯರ್ಥ ಮಾಡಿದರು ಎಂದರು.
ಸ್ವಯಂ ಘೋಷಿತ ಸಿಎಂ ಸಿದ್ದರಾಮಯ್ಯ : ಸಿದ್ದರಾಮಯ್ಯ, ಡಿಕೆಶಿ ಒಬ್ಬರ ಮುಖ ಮತ್ತೊಬ್ಬರು ನೋಡ್ತಿಲ್ಲ. ಖರ್ಗೆ, ಪರಮೇಶ್ವರ್ ಯಾರು ಕೂಡ ಸಿದ್ದರಾಮಯ್ಯ ಕಣ್ಣಿಗೆ ಕಾಣ್ತಿಲ್ಲ. ಸ್ವಯಂ ಘೋಷಿತ ಸಿಎಂ ರೀತಿ ಸಿದ್ದರಾಮಯ್ಯ ಮಾತನಾಡ್ತಿದ್ದಾರೆ ಎಂದು ಟೀಕಿಸಿದರು.
ಮೂರು ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಮತದಾರರು ತಿರಸ್ಕಾರ ಮಾಡಿದ್ದಾರೆ. ಸಿದ್ದರಾಮಯ್ಯ ಅವರನ್ನು ಚಾಮುಂಡೇಶ್ವರಿ ಜನ ಸೋಲಿಸಿದ್ದಾರೆ. ಬಾದಾಮಿ ಜನರು ಜೀವದಾನ ನೀಡಿ ಪುನರ್ಜನ್ಮ ನೀಡಿದ್ದಾರೆ. ಆದರೆ, ಬಾದಾಮಿ ಜನರನ್ನು ಇದೀಗ ಮೂಲೆ ಗುಂಪು ಮಾಡಿದ್ದಾರೆ. ಬಾದಾಮಿಯ ಜನರು ಇವರನ್ನು ಯಾಕಾದರೂ ಗೆಲ್ಲಿಸಿದೆವೋ ಎನ್ನುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ನವರೇ ನಿಜವಾದ ತಾಲಿಬಾನಿಗಳು : ತಾಲಿಬಾನ್ ಕೃತ್ಯ ಆರ್ಎಸ್ಎಸ್ಗೆ ಹೋಲಿಸುತ್ತಾರೆ. ಆದರೆ, ಸಿದ್ದರಾಮಯ್ಯ ಮನಸ್ಥಿತಿಯೇ ತಾಲಿಬಾನ್ ಹಾಗಿದೆ. ಕಾಂಗ್ರೆಸ್ನವರೇ ನಿಜವಾದ ತಾಲಿಬಾನಿಗಳು. ತಾಲಿಬಾನ್ಗೂ ಕಾಂಗ್ರೆಸ್ನವರಿಗೂ ಹೊಂದಾಣಿಕೆ ಆಗಲಿದೆ. ಕಾಂಗ್ರೆಸ್ ತಾಲಿಬಾನ್ ಸಂಸ್ಕೃತಿ ಹೊಂದಿದೆ ಎಂದು ಆಕ್ರೋಶ ಹೊರ ಹಾಕಿದರು.
ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆ : ಕೇಂದ್ರ ಸರ್ಕಾರದ ಅಕ್ಕಿ ನೀಡುವ ಯೋಜನೆ ತಮ್ಮದು ಎನ್ನುತ್ತಾರೆ. ಅಕ್ಕಿಯನ್ನು ಸಿದ್ದರಾಮಯ್ಯ ಮನೆಯಿಂದ ತಂದುಕೊಟ್ಟಿದ್ದಾರಾ? ಬೊಮ್ಮಾಯಿ ಅವರ ನೇತೃತ್ವದಲ್ಲಿ ಮುಂದಿನ ಚುನಾವಣೆ ನಡೆಯಲಿದೆ. ಉಪಚುನಾವಣೆ ಬಗ್ಗೆ ಕೋರ್ ಕಮಿಟಿಯಲ್ಲಿ ಚರ್ಚೆ ಮಾಡಿದ್ದೇವೆ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿ ಹೆಸರು ಘೋಷಣೆ ಮಾಡ್ತೇವೆ ಎಂದರು.