ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಸಮೂಹ ಸಂಸ್ಥೆ ಎದುರಿರುವ ಒಂದು ಸಾವಿರ ಬೆಡ್ಗಳುಳ್ಳ ತಾತ್ಕಾಲಿಕ ಕೋವಿಡ್ ಆಸ್ಪತ್ರೆ ಹಾಗೂ ಆಕ್ಸಿಜನ್ ಉತ್ಪಾದನಾ ಘಟಕಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವ ಜಗದೀಶ್ ಶೆಟ್ಟರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಬಳಿಕ ಮಾಧ್ಯಮದರೊಂದಿಗೆ ಮಾತನಾಡಿದ ಅವರು, ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ, ಆಕ್ಸಿಜನ್ ಕೊರತೆಯಾಗಬಾರದೆಂಬ ನಿಟ್ಟಿನಲ್ಲಿ ಈಗಾಗಲೇ ಕಬ್ಬಿಣ ಉತ್ಪಾದನೆಯನ್ನು ಕಡಿಮೆ ಮಾಡಿ, ಆಕ್ಸಿಜನ್ ಅನ್ನು ಜಾಸ್ತಿ ಉತ್ಪಾದನೆ ಮಾಡಿಟ್ಟುಕೊಳ್ಳಿ ಎಂದು ತಿಳಿಸಿರುವೆ. ಅದರ ಭಾಗವಾಗಿಯೇ ಈ ದಿನ ಬಳ್ಳಾರಿಯ ಜಿಂದಾಲ್ ಸಮೂಹ ಸಂಸ್ಥೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿರುವೆ ಎಂದು ತಿಳಿಸಿದರು.
ಪ್ರತಿದಿನ ಅಂದಾಜು 1,700 ಮೆಟ್ರಿಕ್ ಟನ್ನಷ್ಟು ಆಕ್ಸಿಜನ್ನ ಅಗತ್ಯತೆ ಇದೆ. ಸದ್ಯ 1,200 ಮೆಟ್ರಿಕ್ ಟನ್ನಷ್ಟು ಆಕ್ಸಿಜನ್ ಲಭ್ಯವಿದೆ. ಕೆಲವೊಮ್ಮೆ ಕೇವಲ 900 ಮೆಟ್ರಿಕ್ ಟನ್ನಷ್ಟು ಮಾತ್ರ ಆಕ್ಸಿಜನ್ ಲಭ್ಯವಾಗುತ್ತದೆ. ಅದನ್ನೇ ಸರಿದೂಗಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಜಿಂದಾಲ್ ಸಮೂಹ ಸಂಸ್ಥೆ ಒಂದೇ ಇಡೀ ರಾಜ್ಯಕ್ಕೆ ಆಕ್ಸಿಜನ್ ಪೂರೈಕೆ ಮಾಡುವಷ್ಟು ಸಾಮರ್ಥ್ಯವನ್ನು ಹೊಂದಿದೆಯಾದ್ರೂ ಕೇಂದ್ರ ಸರ್ಕಾರದ ಇಂಡೆಂಟ್ ಬರಬೇಕಾಗಿದೆ. ಅಲ್ಲಿಂದ ಇಂಡೆಂಟ್ ಬಂದ ಮೇಲೆ ಜಿಂದಾಲ್ ಸಮೂಹ ಸಂಸ್ಥೆಯಿಂದಲೇ ಇಡೀ ರಾಜ್ಯಕ್ಕೆ ಆಕ್ಸಿಜನ್ ಪೂರೈಕೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದೆಂದು ಸಚಿವ ಶೆಟ್ಟರ್ ತಿಳಿಸಿದ್ದಾರೆ.