ಬಳ್ಳಾರಿ : ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹೆಚ್ ಎಸ್ ದೊರೆಸ್ವಾಮಿ ಅವರ ಕುರಿತು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವಹೇಳನಕಾರಿ ಹೇಳಿಕೆ ವಿರೋಧಿಸಿ ವಿಧಾನಸಭಾ ಕಲಾಪ ನಡೆಯಲು ಬಿಡೋದಿಲ್ಲ ಎಂದ ಮಾಜಿ ಸಿಎಂ ಸಿದ್ದರಾಮಯ್ಯನವರ ಹೇಳಿಕೆ ದುಂಡಾವರ್ತನೆಯ ಪರಮಾವಧಿ ಅಂತಾ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ರು.
ಜಿಲ್ಲಾ ಕ್ರೀಡಾಂಗಣದಲ್ಲಿಂದು ಘನತ್ಯಾಜ್ಯ ನಿರ್ವಹಣೆ ಹಾಗೂ ಕಸ ಸಂಗ್ರಹ ವಾಹನಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಬಸವನಗೌಡ ಪಾಟೀಲ್ ಅವರ ಹೇಳಿಕೆಯನ್ನು ವಿಧಾನಸಭಾ ಹಾಗೂ ವಿಧಾನ ಪರಿಷತ್ನಲ್ಲಿ ಪ್ರಸ್ತಾಪ ಮಾಡಲಿ. ಅದನ್ನ ಬಿಟ್ಟು ಉಭಯ ಕಲಾಪಗಳನ್ನ ನಡೆಸಲು ಬಿಡೋದಿಲ್ಲ ಎಂಬುದಕ್ಕೆ ಅವರು ಯಾರು? ನೀವು ಅದ್ಹೇಗೆ ಕಾರ್ಯಕಲಾಪ ನಡೆಯಲು ಬಿಡಲ್ಲವೆಂಬುದನ್ನು ನಾನುೂ ನೋಡುವೆ ಎಂದು ಸವಾಲು ಹಾಕಿದರು.
ಕರ್ನಾಟಕ ರಾಜ್ಯ, ಗುಂಡಾಗಳ ರಾಜ್ಯವಲ್ಲ. ಮಾಜಿ ಸಿಎಂ ಸಿದ್ದರಾಮಯ್ಯನವರು ಅನುಭವಿ ರಾಜಕಾರಣಿ. ಮುಖ್ಯಮಂತ್ರಿಯಾಗಿ, ವಿರೋಧ ಪಕ್ಷದ ನಾಯಕರಾಗಿ ಅವರೇ ಈ ಗುಂಡಾಗಳಂತೆ ವಿಧಾನಸಭಾ ಕಾರ್ಯಕಲಾಪ ನಡೆಯಲು ಬಿಡೋದಿಲ್ಲ ಎನ್ನುವುದು ತರವಲ್ಲವೆಂದು ಅಸಮಾಧಾನ ಹೊರ ಹಾಕಿದರು. ಅಂತಹ ಗೂಂಡಾ ಸಂಸ್ಕೃತಿಯನ್ನು ನಾನಂತೂ ಒಪ್ಪಲ್ಲ. ಮಾರ್ಚ್ 5 ರಂದು ಮುಖ್ಯಮಂತ್ರಿ ಯಡಿಯೂರಪ್ಪನವರು ಬಜೆಟ್ ಮಂಡಿಸಲಿದ್ದಾರೆ. ಇಡೀ ರಾಜ್ಯದ ಜನತೆ ಅತ್ಯಂತ ಕಾತರದಿಂದ ಕಾಯುತ್ತಾ ಕುಳಿತಿದ್ದಾರೆ.
ಇದೇ ಸಂದರ್ಭದಲ್ಲಿ ಇಂತಹ ಹೇಳಿಕೆ ನೀಡೋದು ಮಾಜಿ ಸಿಎಂ ಸಿದ್ದರಾಮಯ್ಯರನವರಿಗೆ ಎಷ್ಟು ಸಮಂಜಸ, ನೀವೆ ಹೇಳಿ ಎಂದು ಪ್ರಶ್ನಿಸಿದ್ದಾರೆ. ಈ ದೇಶದ ಅತ್ಯಂತ ಮೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರನ್ನ ಕೊಲೆಗಡುಕ ಎನ್ನೋದು ಎಷ್ಟು ಸರಿ?. ಅವರೊಬ್ಬ ಮುಖ್ಯಮಂತ್ರಿಯಾಗಿದ್ದವರು, ವಿಪಕ್ಷ ನಾಯಕರೂ ಕೂಡಾ ಆಗಿದ್ದಾರೆ. ಅಂತಹವರೇ ಈ ದೇಶದ ಪ್ರಧಾನಿ ಮೋದಿಯವರ ಬಗ್ಗೆ ಹಗುರಾಗಿ ಮಾತನಾಡೋದು ತರವಲ್ಲ ಎಂದು ಸಿದ್ದರಾಮಯ್ಯನವ್ರ ವಿರುದ್ಧ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.