ಬಳ್ಳಾರಿ : ಗುರುವಿನ ಗುಲಾಮನಾಗುವ ತನಕ ದೊರಕದಯ್ಯ ಮುಕ್ತಿ.. ಆ ನುಡಿಗೆ ತಕ್ಕಂತೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ನಡೆದುಕೊಳ್ಳುವ ಮೂಲಕ ಇತರರಿಗೂ ಮಾದರಿಯಾಗಿದ್ದಾರೆ.
ಒಂದಲ್ಲ, ಎರಡಲ್ಲ ಬರೋಬ್ಬರಿ ಆರು ಲಕ್ಷ ರೂ.ಗಳನ್ನ ಗುರುವಿಗೆ ಕಾಣಿಕೆಯಾಗಿ ಸಲ್ಲಿಸಿದ್ದಾರೆ. ಮುಪ್ಪಿನಾವಸ್ತೆಯಲ್ಲಿರುವ ಗುರುವಿಗೆ ಶಿಷ್ಯರೇ ನೆರವಾಗುತ್ತಾರೆಂಬ ತಾಜಾ ಉದಾಹರಣೆಗೆ ಸಚಿವ ಆನಂದ ಸಿಂಗ್ ಅವರು ನಾಂದಿ ಹಾಡಿದ್ದಾರೆ.
ತಮಗೆ ಬಾಲ್ಯದಲ್ಲಿ ಪಾಠ ಹೇಳಿಕೊಟ್ಟವರನ್ನ ಮರೆಯದ ಸಚಿವ ಆನಂದ ಸಿಂಗ್ ಅವರು ಬಳ್ಳಾರಿ ಮೇರಿ ಮಾತಾ ಪ್ರೇಮಾಶ್ರಮದಲ್ಲಿ ನೆಲೆಸಿರುವ ವಯೋವೃದ್ಧೆ ಫಾತಿಮಾ ಶಿಕ್ಷಕಿಯನ್ನ ಭೇಟಿಯಾಗಿ ಅವರ ಕುಶಲೋಪರಿ ವಿಚಾರಿಸಿದಾಗ, ಟೀಚರ್ ನಿಮಗೇನಾದ್ರೂ ನನ್ನಿಂದ ಸಹಾಯಹಸ್ತ ಆಗಬೇಕಾ ಅಂತಾ ಸಚಿವರು ವಿನಮ್ರವಾಗಿ ಕೇಳಿಕೊಂಡಿದ್ದಾರೆ.
ಆ ವಯೋವೃದ್ಧೆ ಶಿಕ್ಷಕಿ ಫಾತಿಮಾ ಅವರು, ತನಗಾಗಿ ಏನನ್ನೂ ಕೇಳದೇ ವಿಧವೆಯಾಗಿದ್ದ ವಿದ್ಯಾರ್ಥಿನಿ ರಜಿನಿಗೆ ಸಹಾಯಹಸ್ತ ನೀಡುವಂತೆ ಕೋರಿದ್ದಾರೆ. ತನಗಾಗಿ ಏನೂ ಕೇಳದೆ ಹಿರಿಯ ಶಿಕ್ಷಕಿ ಫಾತಿಮಾ ಅವರು ಇತರ ಗುರುವೃಂದಕ್ಕೂ ಆದರ್ಶಪ್ರಾಯರಾಗಿದ್ದಾರೆ. ತನ್ನ ಕೈಯಲ್ಲೇ ವಿದ್ಯಾಭ್ಯಾಸ ಮಾಡಿದ್ದ ರಜಿನಿಗೆ ಆ ಭಗವಂತ ಅನ್ಯಾಯ ಮಾಡಿಬಿಟ್ಟನಲ್ಲ ಎಂದು ಆಲೋಚಿಸಿ ಆ ಶಿಕ್ಷಕಿಯೇ ಮುಂದೆ ನಿಂತುಕೊಂಡು ತನ್ನ ಶಿಷ್ಯನಿಂದ ಮತ್ತೊಬ್ಬ ಶಿಷ್ಯೆಗೆ (ವಿಧವೆ) ಸಹಾಯಹಸ್ತ ಮಾಡಿಸುವಲ್ಲಿ ಯಶ ಕಂಡಿದ್ದಾರೆ.
ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಹಿರಿಯ ಶಿಕ್ಷಕಿ ಫಾತಿಮಾ ಅವರು, ನನ್ನ ವಿದ್ಯಾರ್ಥಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರು ನಿನ್ನೆಯ ದಿನ ಪ್ರೇಮಾಶ್ರಮಕ್ಕೆ ಬಂದಿದ್ದರು. ಆಗ ಈಕೆಯನ್ನ ತೋರಿಸಿ ಈಕೆಗೆ ಮನೆ ಕಟ್ಟಿಸಿಕೊಳ್ಳಲು ಆರ್ಥಿಕವಾಗಿ ಸಹಾಯ ಹಸ್ತ ನೀಡುವಂತೆ ಕೋರಿದ್ದೆ. ಆಗ ನನ್ನ ಶಿಷ್ಯ ಸಚಿವ ಆನಂದ ಸಿಂಗ್ ಅವರು ಏನನ್ನೂ ಯೋಚಿಸದೇ ಅಂದಾಜು ಆರು ಲಕ್ಷ ರೂ. ಗುರುವಿನ ಕಾಣಿಕೆಯಾಗಿ ನೀಡಿದ್ದಾನೆ.
ನಾನು ಹೊಸಪೇಟೆ ತಾಲೂಕಿನ ಕಲ್ಲಹಳ್ಳಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾಗ ಈ ಆನಂದಸಿಂಗ್ ನನ್ನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ನಾನು ಕೇಳಿದ ಕೂಡಲೇ ನನ್ನ ಶಿಷ್ಯೆಯಾದ ರಜಿನಿಗೆ ಸಹಾಯಹಸ್ತ ಚಾಚಿರೋದು ನನಗೆ ಬಹಳ ಖುಷಿ ಎನಿಸಿದೆ. ನನ್ನ ಕೈಯಲ್ಲೇ ಕಲಿತ ಈ ಹುಡುಗನಿಗೆ ಸಹಾಯಹಸ್ತ ನೀಡೋ ಮನೋಭಾವ ಇದೆಯಲ್ಲ ಅಷ್ಟು ಸಾಕು.. ನನಗೆ ಈ ಜನ್ಮ ಪಾವನ ಆಯಿತೆಂದರು.
ನೆರವು ಪಡೆದ ರಜಿನಿ ಅವರು ಮಾತನಾಡಿ, ನಾನೂ ಕೂಡ ಫಾತಿಮಾ ಸಿಸ್ಟರ್ ಅವರ ವಿದ್ಯಾರ್ಥಿನಿ. ನನಗೆ ಮದುವೆಯಾಗಿ ಮೂರು ಮಕ್ಕಳಿವೆ. ನನ್ನ ಗಂಡ ಅನಾರೋಗ್ಯದ ಹಿನ್ನೆಲೆ ತೀರಿದ. ಆಗಿನಿಂದಲೂ ಈ ಪ್ರೇಮಾಶ್ರಮವೇ ನನಗೆ ನೆಲೆಯಾಯಿತು. ನನ್ನ ಮೂರು ಮಕ್ಕಳೊಂದಿಗೆ ಇರಲು ಸಾಧ್ಯವಾಗೋದನ್ನ ಅರಿತ ಫಾತಿಮಾ ಸಿಸ್ಟರ್ ಅವರು, ಮನೆ ನಿರ್ಮಿಸಿ ಕೊಡಲು ಯೋಚಿಸಿದ್ರು. ನಿವೇಶನ ಖರೀದಿ ಏನೋ ಆಯಿತು. ಮನೆಯ ಬೇಸ್ ಮಟ್ಟವೂ ನಡೆಯಿತು.
ಆಗ ನನಗೆ ಆರ್ಥಿಕವಾಗಿ ಸಂಕಷ್ಟ ಎದುರಾಯಿತು. ಆಗ ಫಾತಿಮಾ ಸಿಸ್ಟರ್ ಅವರ ವಿದ್ಯಾರ್ಥಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರ ಬಳಿ ಹೇಳಿ ಕೊಂಡಾಗ, ಹಣ ಎಷ್ಟುಬೇಕೆಂದ್ರು. ಆರು ಲಕ್ಷ ರೂ.ಗಳ ಅಂದಿದ್ದರು. ಅವರು ಕ್ಷಣಾರ್ಧದಲ್ಲಿಯೇ ನಗದು ಹಣವನ್ನ ನನ್ನ ಕೈಗಿತ್ತರು ಎಂದರು.